ಸಾಂಸ್ಕೃತಿಕ

ಕುಂದಾಪುರ: ಯಕ್ಷಗಾನ ಕಲಾವಿದ ಕೋಡಿ ಕುಷ್ಠ ಗಾಣಿಗ ನಿಧನ

Views: 82

ಕನ್ನಡ ಕರಾವಳಿ ಸುದ್ದಿ: ತೆಂಕು ಮತ್ತು ಬಡಗು ಉಭಯತಿಟ್ಟುಗಳ ಪ್ರಸಿದ್ಧ ಸ್ತ್ರೀ ವೇಷಧಾರಿ ಕೋಡಿ ಕುಷ್ಠ ಗಾಣಿಗ(78) ಗುರುವಾರ ಕುಂದಾಪುರ ಕೋಡಿಯಲ್ಲಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಹೆರಂಜಾಲು ವೆಂಕಟರಮಣ ಗಾಣಿಗ ಅವರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆ, ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಾಭ್ಯಾಸ ಮಾಡಿ, ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಕಲಾಭಿಮಾನಿಗಳ ಅಭಿಮಾನಕ್ಕೆ ಪಾತ್ರರಾಗಿದ್ದರು.

ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದ್ರೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ, ಮಾಯಾಪೂತನಿ, ಮಾಯಾಶೂರ್ಪನಖಿ, ಚಂದ್ರಮತಿ ಹೀಗೆ ಸ್ತ್ರೀಪಾತ್ರದ ನವರಸಗಳಲ್ಲಿಯೂ ನಿಸ್ಸೀಮರಾಗಿದ್ದರು. ಪುರುಷ ವೇಷಗಳಾದ ಪರಶುರಾಮ, ವಿಷ್ಣು, ಕೃಷ್ಣ ಪಾತ್ರಗಳನ್ನು ಮಾಡುತ್ತಿದ್ದರು. ಅವರು ಅಮೃತೇಶ್ವರಿ, ಮಾರಣಕಟ್ಟೆ, ಕಲಾವಿಹಾರ ಮೇಳ, ರಾಜರಾಜೇಶ್ವರಿ ಮೇಳ ಹಾಗೂ ಸುದೀರ್ಘವಾಗಿ ಕಟೀಲು ಮೇಳದಲ್ಲಿ ಒಟ್ಟು ಸುಮಾರು ಮೂರುವರೆ ದಶಕಗಳ ಕಾಲ ತಿರುಗಾಟ ಮಾಡಿದ್ದಾರೆ.

ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನ ಮನ್ನಣೆ ಪಡೆದ ಇವರು ಶ್ರೀ ದೇವಿ ಮಹಾತ್ಮೆಯ ದೇವಿ ಪಾತ್ರ ಇಂದಿಗೂ ಯಕ್ಷಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ.

ಉಡುಪಿ ಕಲಾರಂಗ ಪ್ರಶಸ್ತಿ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ,ಡಾ.ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ, ಶ್ರೀ ಕ್ಷೇತ್ರ ಕೋಡಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಇವರಿಗೆ ಸಂದಿದೆ.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೇ 31ರಂದು ಉಡುಪಿ ಯಕ್ಷಗಾನ ಕಲಾರಂಗ ವತಿಯಿಂದ 50 ಹಿರಿಯ ಸಾಧಕ ಕಲಾವಿದರಿಗೆ ನೀಡಲ್ಪಟ್ಟ ಐವತ್ತು ಸಾವಿರ ಮೊತ್ತವನ್ನೊಳಗೊಂಡ ಸುವರ್ಣ ಪುರಸ್ಕಾರಕ್ಕೆ ಕೋಡಿ ಕುಷ್ಠ ಗಾಣಿಗ ಭಾಜನರಾಗಿದ್ದರು.

 

Related Articles

Back to top button