ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ: ತೀವ್ರ ಆಕ್ರೋಶ ಬೆನ್ನಲ್ಲೇ ಅಧಿಕಾರಿ ಸಸ್ಪೆಂಡ್ ಗೆ ಸೂಚನೆ

Views: 157
ಕನ್ನಡ ಕರಾವಳಿ ಸುದ್ದಿ:ಸಿಇಟಿ ಪರೀಕ್ಷೆ ವೇಳೆ ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣದಲ್ಲಿ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲೇ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಬಲವಂತದಿಂದ ಜನಿವಾರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿಗಳು, ಅಧಿಕಾರಿಗಳು ಕಳುಹಿಸಿದ್ದಾರೆ. ಈ ಘಟನೆ ಬಗ್ಗೆ ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದು, ಪರೀಕ್ಷಾ ಕೇಂದ್ರದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
ಶಿವಮೊಗ್ಗದ ಬಳಿಕ ಬೀದರ್ ನಲ್ಲಿಯೂ ಸಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ದೊಡ್ಡ ಎಡವಟ್ಟು ಮಾಡಿದ್ದು, ವಿದ್ಯಾರ್ಥಿಯ ಭವಿಷ್ಯವೇ ಹಾಳಾಗುವಂತೆ ಮಾಡಿದ್ದಾರೆ
ಸಿಇಟಿ ಪರೀಕ್ಷೆ ಬರೆಯಲು ಬೀದರ್ ನ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿ ಸುಚಿವೃತ ಕಲಕರ್ಣಿಗೆ ಜನಿವಾರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಹೋಗು ಎಂದಿದ್ದಾರೆ. ಅದಕ್ಕೆ ಆತ ಜನಿವಾರ ತೆಗೆಯಲು ಸಾಧ್ಯವಿಲ್ಲ. ಬೇಕಾದರೆ ಚಕ್ ಮಾಡಿ ಒಳಗೆ ಬಿಡಿ ಪರೀಕ್ಷೆಗೆ ಟೈಂ ಆಗುತ್ತಿದೆ ಎಂದಿದ್ದಾನೆ. ಆದರೆ ಸಿಬ್ಬಂದಿಗಳು ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ ಎಂದು ಆತನನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿಲ್ಲ. ವಿದ್ಯಾರ್ಥಿ ಎಷ್ಟೇ ಮನವಿ ಮಾಡಿದರೂ ಕೇಳಿಲ್ಲ. ನೊಂದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದಿಂದ ವಾಪಸ್ ಆಗಿದ್ದಾನೆ.
ಬೀದರ್ ನ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಿನ್ನೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮ್ಯಾಥ್ಸ್ ವಿಷಯದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಆತನಿಗೆ ಇಂಜಿನಿಯರಿಂಗ್ ಸೀಟ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ. ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗಳ ಇಲ್ಲಸಲ್ಲದ ನಿಯಮಗಳು ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯುಂಟುಮಾಡಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.