ಕರಾವಳಿಯಲ್ಲಿ ಬೆಳಗಿನವರೆಗೂ ಯಕ್ಷಗಾನಕ್ಕೆ ಪ್ರದರ್ಶನದ ಅನುಮತಿಗೆ ಇನ್ನಷ್ಟು ಸರಳಕ್ಕೆ ಭರವಸೆ

Views: 103
ಕನ್ನಡ ಕರಾವಳಿ ಸುದ್ದಿ: ರಾತ್ರಿ ಇಡೀ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸರು ನಿರ್ಬಂಧ ವಿಧಿಸುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆ ನಡೆದಿದ್ದು, ಯಕ್ಷಗಾನ ನಮ್ಮ ದೇಶದ ಆಸ್ತಿ, ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಧ್ವನಿವರ್ಧಕ, ಪರವಾನಿಗೆ ನಿಯಮ ಸರಳಗೊಳಿಸುವಂತೆ ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಪ್ರಸ್ತಾವಿಸಿದರು. ಉಭಯ ಜಿಲ್ಲೆಗಳಲ್ಲಿ ರಾತ್ರಿ ಬೆಳಗಾಗುವವರೆಗೆ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಆದರೆ ಬಳಕೆ ಮಾಡಬಾರದೆಂದು ಪೊಲೀಸರು ಅಡ್ಡಿಯುಂಟು ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಈ ಸಂಬಂಧ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಗಮನ ಸೆಳೆದರು. ರಾತ್ರಿ 10ರ ಬಳಿಕ ಮೈಕ್ ಬಳಕೆ ಮಾಡಬಾರದೆಂದು ಪೊಲೀಸರು ಅಡ್ಡಿ ಉಂಟುಮಾಡುತ್ತಿದ್ದಾರೆ. ಪ್ರದರ್ಶನದ ಅನುಮತಿಗೆ ವಿಧಿಸಿರುವ ನಿಯಮಗಳು ತೊಂದರೆಯನ್ನುಂಟು ಮಾಡುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆ ಶಾಸಕರು, ವಿಪಕ್ಷ ನಾಯಕ ಆರ್. ಅಶೋಕ, ಆರಗ ಜ್ಞಾನೇಂದ್ರ ಮಾತ್ರವಲ್ಲ, ಖುದ್ದು ಸ್ಪೀಕರ್ ಖಾದರ್ ಕೂಡ ಧ್ವನಿಗೂಡಿಸಿದರು. ನಿಯಮದ ಹೆಸರಿನಲ್ಲಿ ಸಾಂಪ್ರದಾಯಿಕ ಕಲಾ ಪ್ರದರ್ಶನಗಳಿಗೆ ಅಡ್ಡಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್. ಯಕ್ಷಗಾನಕ್ಕೆ ಅನುಮತಿ ಬೇಕೆಂಬ ನಿಯಮ ನಿಮ್ಮ ಸರಕಾರದ ಅವಧಿಯದ್ದೇ. ಅಂತಹ ನಿಯಮಗಳಿಂದ ತೊಂದರೆಯಾಗುತ್ತಿದೆ. ಒಂದು ವಾರ ಅಥವಾ 15 ದಿನ ಮುಂಚಿತವಾಗಿಯೇ ತಯಾರಿ ಇರುತ್ತದೆ. ಹಿಗಾಗಿ ಅನುಮತಿ ಪಡೆಯಬಹುದು. ಯಕ್ಷಗಾನ ನಮ್ಮ ದೇಶದ ಆಸ್ತಿ. ಬೆಳಗಿನವರೆಗೂ ನಡೆಯಬೇಕು. ಇದಕ್ಕೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡಿದರು.