ಆರೋಗ್ಯ

ನಂದಿನಿ ಇಡ್ಲಿ ದೋಸೆ ಹಿಟ್ಟಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ, ದರ ಎಷ್ಟು?

Views: 274

ಕನ್ನಡ ಕರಾವಳಿ ಸುದ್ದಿ: ಕೆಎಂಎಫ್ ನಂದಿನಿ ಬ್ರ್ಯಾಂಡ್‌  ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟ ಬೆಂಗಳೂರಿನಲ್ಲಿ ಭಾರಿ ಯಶಸ್ಸು ಕಂಡಿದೆ. ಮೂರು ದಿನಗಳಲ್ಲಿ 2250 ಮೆಟ್ರಿಕ್ ಟನ್‌ಗಳಷ್ಟು ಮಾರಾಟವಾಗಿದೆ. ಈ ಯಶಸ್ಸಿನಿಂದಾಗಿ, ಕೆಎಂಎಫ್ ರಾಜ್ಯದ ಇತರ ಜಿಲ್ಲೆಗಳಿಗೂ ಶೀಘ್ರದಲ್ಲಿ ಈ ಹಿಟ್ಟನ್ನು ವಿತರಿಸಲು ಯೋಜಿಸಿದೆ. ಒಂದು ವಾರದೊಳಗೆ ಇತರ ಜಿಲ್ಲೆಗಳನ್ನೂ ಮಾರಾಟ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸದ್ಯ ಕೆಎಂಎಫ್ ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಗಿಕವಾಗಿ ದೋಸೆ ಹಿಟ್ಟಿನ ಮಾರಾಟ ಆರಂಭಿಸಿದೆ. ಇದೀಗ ರಾಜಧಾನಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದ್ದಂತೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ದೋಸೆ-ಇಡ್ಲಿ ಹಿಟ್ಟಿನ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಇತ್ತ ನಂದಿನಿ ಪರಿಚಯಿಸಿರುವ ದೋಸೆ ಹಿಟ್ಟಿನಲ್ಲಿ ವೇ ಪ್ರೊಟೀನ್ ಕೂಡ ಇರುವುದರಿಂದ ಸದ್ಯ ಜಿಮ್, ಡಯಟ್ ಬಗ್ಗೆ ಗಮನಹರಿಸುವವರು ಕೂಡ ನಂದಿನಿ ಹಿಟ್ಟಿನ ಮೊರೆಹೋಗುತ್ತಿದ್ದಾರೆ.

ಮುಂದಿನ ಒಂದು ವಾರದೊಳಗಾಗಿ ಇತರೆ ಜಿಲ್ಲೆಗಳಲ್ಲೂ ದೋಸೆ, ಇಡ್ಲಿ ಹಿಟ್ಟು ಮಾರಾಟ ಆರಂಭಿಸುವುದಾಗಿ ಕೆಎಂಎಫ್ ಸುಳಿವು ನೀಡಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ನಂದಿನಿ ದೋಸೆ ಹಿಟ್ಟಿನ ದರ ಎಷ್ಟು?

ಸದ್ಯ ಬೆಂಗಳೂರಲ್ಲಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂಗೆ 80 ರೂಪಾಯಿ ದರ ನಿಗದಿಪಡಿಸಿರುವ ಕೆಎಂಎಫ್, ಇದೇ ಪ್ರಥಮಬಾರಿಗೆ ದೋಸೆ ಹಿಟ್ಟಿಗೆ ಶೇಕಡ 5 ರಷ್ಟು ವೇ ಪ್ರೊಟೀನ್ ಸೇರಿಸಿ ಜನರಿಗೆ ನೀಡುತ್ತಿದೆ. ಇದರಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ.

ಸದ್ಯ ಈಗಾಗಲೇ ಹಲವು ಉತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಜನರ ಮನಗೆದ್ದಿದ್ದ ನಂದಿನಿ, ಇದೀಗ ತನ್ನ ಹೊಸ ಪ್ರಾಡಕ್ಟ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಹೊರಟಿದೆ.

Related Articles

Back to top button