ಅಪ್ರಾಪ್ತ ವಿದ್ಯಾರ್ಥಿನಿಗೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್: ಆರೋಪಿ ಅರೆಸ್ಟ್

Views: 193
ಕನ್ನಡ ಕರಾವಳಿ ಸುದ್ದಿ: ಕಾಲೇಜಿನಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಗೆ ಪ್ರೀತಿಯ ಹೆಸರು ಹೇಳಿ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ಪುತ್ತೂರಿನ ಕಡಬ ತಾಲೂಕಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿ ಆರೋಪಿ ಎಂದು ಗುರುತಿಸಲಾಗಿದೆ. ಅನೇಕ ಬಾರಿ ಪುತ್ತೂರು ಬಳಿಯ ಬಾಡಿಗೆ ರೂಂ ಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ. ಅಲ್ಲದೆ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದು ಕೊಟ್ಟಿದ್ದ. ಇದರ ಜೊತೆಗೆ ಖಾಸಗಿ ಕ್ಷಣದ ನಗ್ನ ವೀಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ಅಪ್ರಾಪ್ತೆ ಉಲ್ಲೇಖಿದ್ದಾರೆ.
ಸೋಮವಾರ (ಡಿ.30) ಕುಂಬ್ರದಲ್ಲಿರುವ ಬಾಡಿಗೆ ರೂಂಗೆ ಕರೆದೊಯ್ದು ಅಲ್ಲೇ ಉಳಿದುಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ. ಮರುದಿನ ರೂಂನಲ್ಲಿ ಇರುವಾಗಲೇ ಬಾಲಕಿ ಜತೆ ಕ್ಷುಲ್ಲಕ ಕಾರಣಕ್ಕೆ ದೈಹಿಕ ಹಿಂಸೆ ನೀಡಿ ಜಗಳವಾಡಿದ್ದ. ಬಳಿಕ ಬೈಕಿನಲ್ಲಿ ಕರೆದೊಯ್ದು ಫರಂಗಿಪೇಟೆ ಬಳಿ ರಸ್ತೆ ಬದಿ ಬಿಟ್ಟು ಹೋಗಿದ್ದ. ಮನೆಯವರಿಗೆ ವಿಷಯ ತಿಳಿಸಿದ್ದ ಬಾಲಕಿಗೆ ಮನೆಮಂದಿ ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕನನ್ನು ಬಂಧಿಸಿ ಆತನ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






