ರಾಜಕೀಯ

ಯಡಿಯೂರಪ್ಪ ಪತ್ನಿ ಸಾವಿನ ಹಿಂದೆ ಶೋಭಾ ಕರಂದ್ಲಾಜೆ ಕೈವಾಡ: ಸ್ಫೋಟಕ ಹೇಳಿಕೆ ನೀಡಿದ ಸಚಿವ ಬೈರತಿ ಸುರೇಶ್

Views: 120

ಕನ್ನಡ ಕರಾವಳಿ ಸುದ್ದಿ: ಮುಡಾ ಹಗರಣದ ಎಲ್ಲಾ ದಾಖಲೆಗಳನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸುಟ್ಟು ಹಾಕಿದ್ದಾರೆ. ಅವರನ್ನು ಬಂಧಿಸಿ ತನಿಖೆ ನಡೆಸಿದರೆ ಎಲ್ಲಾ ಸತ್ಯಗಳು ಹೊರಬರಲಿವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಚಿವ ಬೈರತಿ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ನಿರಾಧಾರ. ನಾನು ದಾಖಲೆಗಳನ್ನು ಸುಟ್ಟು ಹಾಕಿದ್ದೇನೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಹಾಗೊಂದು ವೇಳೆ ನಾನು ದಾಖಲೆಗಳನ್ನು ಸುಟ್ಟು ಹಾಕಿದ್ದೇನೆ ಎಂಬ ಅನುಮಾನವಿದ್ದರೆ ಅವರು ನನ್ನ ವಿರುದ್ಧ ದೂರು ನೀಡಲಿ. ದೂರು ನೀಡದೇ ಸತ್ಯ ಮರೆಮಾಚುವುದು ಕೂಡ ಅಪರಾಧ. ನಾವು ಕೂಡ ಶೋಭಾ ಕರಂದ್ಲಾಜೆ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ಗುಡುಗಿದ್ದಾರೆ.

ಇದೇ ವೇಳೆ ಶೋಭಾ ಕರಂದ್ಲಾಜೆ ನನ್ನ ವಿರುದ್ಧ ಆರೋಪ ಮಾಡಿದಂತೆ ನಾನು ಕೂಡ ಅವರ ವಿರುದ್ಧ ಆರೋಪ ಮಾಡಬಹುದು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿಗೆ ಕಾರಣವೇನು? ಮೈತ್ರಾದೇವಿ ಸಾವಿನ ಹಿಂದೆ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂಬ ಅನುಮಾನವಿದೆ. ಈ ಬಗ್ಗೆ ಅವರ ವಿರುದ್ಧ ತನಿಖೆಯಾಗಲಿ ಎಂದು ನಾನು ಹೇಳುತ್ತೇನೆ. ಇದನ್ನು ಶೋಭಾ ಕರಂದ್ಲಾಜೆ ಒಪ್ಪುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

”ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಆ ರೀತಿ ಮಾತನಾಡುವುದಾದರೆ ನಾನೂ ಹೇಳುತ್ತೇನೆ. 20 ವರ್ಷಗಳ ಹಿಂದೆ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವು ಹೇಗಾಯಿತು ಎಂದು ಕೇಳುತ್ತೇನೆ. ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂದು ಹೇಳುತ್ತೇನೆ. ಕೂಡಲೇ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಗೃಹ ಸಚಿವರು ತೀರ್ಮಾನಿಸಬೇಕು,” ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪನವರು ಒಳ್ಳೆಯವರೇ, ಅವರ ಮಕ್ಕಳು ಕೂಡ ಒಳ್ಳೆಯವರೇ. ಆದರೆ ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ತನಿಖೆ ನಡೆಯಲಿ. ಮೈತ್ರಾದೇವಿ ಸಾವಿಗೆ ಏನು ಕಾರಣವೆಂದು ಶೋಭಾ ಕರಂದ್ಲಾಜೆ ಹೇಳಲಿ. ಈ ಬಗ್ಗೆ ಚರ್ಚೆಯಾಗಲಿ. ನಾವೂ ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಾರೆ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ರಾಜಕೀಯ ಕೆಸರೆರಚಾಟ, ವಾಗ್ದಾಳಿ ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಗಳಿಗೂ ಕಾರಣವಾಗಿದ್ದು, ಸಚಿವ ಬೈರತಿ ಸುರೇಶ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

 

Related Articles

Back to top button
error: Content is protected !!