ಮಂಗಳೂರು-ಉಡುಪಿ ವಿಧಾನಪರಿಷತ್ ಉಪಚುನಾವಣೆ: RSS ಶಾಖೆಯ ತರಬೇತುದಾರ ಕಿಶೋರ್ ಕುಮಾರ್ ಪುತ್ತೂರು ಬಿಜೆಪಿ ಅಭ್ಯರ್ಥಿ

Views: 92
ಉಡುಪಿ:ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಯಲಿದೆ.ವಿಧಾನಪರಿಷತ್ ಉಪಚುನಾವಣೆಗೆ ಬಿಜೆಪಿ, ಕಿಶೋರ್ ಕುಮಾರ್ ಪುತ್ತೂರು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಮಂಗಳೂರು -ಉಡುಪಿ ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಸುಮಾರು 15 ಕ್ಕೂ ಮಂದಿ ಆಕಾಂಕ್ಷಿಗಳಾಗಿದ್ದಾರೆ.
ಕಿಶೋರ್ ಕುಮಾರ್ ಪುತ್ತೂರು ಯಾರು?
ಕಿಶೋರ್ ಕುಮಾರ್ ಪುತ್ತೂರು ಸದ್ಯ ಬಿಜೆಪಿ, ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಆರ್ಎಸ್ಎಸ್ ಕಲ್ಪನೆ ಶಾಖೆಯ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. 1994ರಿಂದ 1998ರವರೆಗೆ ಪುತ್ತೂರಿನ ನರಿಮೊಗರು ಪ್ರದೇಶದ ಆರ್ಎಸ್ಎಸ್ ಮಂಡಲದಲ್ಲಿ ಸೇವೆ ಸಲ್ಲಿಸಿದ್ದಾರೆ. ABVP ಅಡಿಯಲ್ಲಿ 2000ರಿಂದ 2004ರವರೆಗೆ ವಿದ್ಯಾರ್ಥಿ ಚಳುವಳಿಯಲ್ಲಿ ಭಾಗಿಯಾಗಿದ್ದರು.
ಬಜರಂಗದಳದ (ಉಡುಪಿ, ಮಂಗಳೂರು, ಕೊಡಗು ಮತ್ತು ಕಾಸರಗೋಡು) ಮಂಗಳೂರು ವಿಭಾಗ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. 2008ರಿಂದ 2013ರವರೆಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ, 2014ರಿಂದ 2016ರವರೆಗೆ ಯುವ ಮೋರ್ಚಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ಸೌತ್ ಕೆನರಾ ಆರ್ಟಿಐ ಆ್ಯಕ್ಟಿವಿಸ್ಟ್ ಗ್ರೂಪ್ನ ಅಧ್ಯಕ್ಷ, ಪುತ್ತೂರು ಸಾಹಿತ್ಯ ಸಂಗಮದ ಗೌರವಾಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಸಾಮಗ್ರಿ ಪೂರೈಕೆದಾರರ ಒಕ್ಕೂಟದ (ಮಾಲೀಕರು ಮತ್ತು ಚಾಲಕರು) ಗೌರವಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
2021ರಿಂದ 2023ರವರೆಗೆ ಮೆಸ್ಕಾಂನ ನಾಮಿನಿ ನಿರ್ದೇಶಕರಾಗಿದ್ದರು. ಬಿಜೆಪಿ ದ.ಕ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.






