ರಾಜಕೀಯ

ಉಡುಪಿ,ದ.ಕ.ವಿಧಾನ ಪರಿಷತ್ ಉಪ ಚುನಾವಣೆ: ಟಿಕೆಟ್ ಯಾರಿಗೆ?

Views: 174

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸ್ಥಾನದ ಮರು ಚುನಾವಣೆ ಅ.21 ರಂದು ನಿಗದಿಯಾಗಿದ್ದು ಬಿಜೆಪಿ- ಜೆಡಿಎಸ್‌ ಮ್ರೈತ್ರಿ, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ‌.

ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮಧ್ವರಾಜ್, ಉದಯಕುಮಾರ್ ಶೆಟ್ಟಿ, ಸತೀಶ್ ಕುಂಪಲ ಸೇರಿದಂತೆ 15 ಮಂದಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಈ ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಡಲಾಗಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ಕಾಂಗ್ರೆಸ್ಸಿನಿಂದ  ಸ್ಪರ್ಧಿಸಲು ಐವರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆಯವರೇ ಆಕಾಂಕ್ಷಿಗಳಾಗಿದ್ದು, ಮಾಜಿ ಜಿ.ಪಂ. ಅಧ್ಯಕ್ಷ ರಾಜು ಪೂಜಾರಿ, ರಾಜು ಕಾರ್ಕಳ, ಭುಜಂಗ ಶೆಟ್ಟಿ ಸೇರಿದಂತೆ ಐವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ದ.ಕ.ದಲ್ಲಿ 3,551, ಉಡುಪಿಯಲ್ಲಿ 2,486 ಮತದಾರರು: ದ.ಕ. ಸ್ಥಳೀಯಾಡಳಿತ ಪ್ರಾಧಿಕಾರ ಕ್ಷೇತ್ರದ ವ್ಯಾಪ್ತಿಗೆ ದ.ಕ. ಮತ್ತು ಉಡುಪಿ ಜಿಲ್ಲೆ ಸೇರಿದೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಎರಡು ಜಿಲ್ಲೆಗಳ ಸ್ಥಳೀಯಾಡಳಿತಗಳ ಮತದಾರರು ಮತ ಚಲಾಯಿಸಲಿದ್ದಾರೆ. ದ.ಕ.ದಲ್ಲಿ ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಸೇರಿ 234 ಸ್ಥಳೀಯ ಸಂಸ್ಥೆಗಳಲ್ಲಿ 3,551 ಮಂದಿ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಉಡುಪಿಯಲ್ಲಿ 158 ಸ್ಥಳೀಯ ಸಂಸ್ಥೆಗಳಲ್ಲಿ 2,486 ಮಂದಿ ಮತ ಚಲಾಯಿಸಲಿದ್ದಾರೆ‌. ಒಟ್ಟು 6,037 ಜನರು ಮತ ಹಕ್ಕು ಹೊಂದಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸೆ.26 ರಿಂದ ಅ.3ರವರೆಗೆ ಅವಕಾಶವಿದೆ. ಅ.4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.7ರಂದು ನಾಮಪತ್ರ ವಾಪಸ್‌ಗೆ ಕೊನೆ ದಿನ. ಅ.21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ಹಾಗೂ ಅ.24ರಂದು ಮತ ಎಣಿಕೆ ನಡೆಯಲಿದೆ.

ಈ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಬಿಜೆಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಇದೀಗ ಅವರು ಸಂಸದರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕ್ಷೇತ್ರ ಉಳಿಸಿಕೊಳ್ಳುತ್ತದೆಯೋ ಅಥವಾ ಕಾಂಗ್ರೆಸ್ ಅಚ್ಚರಿಯ ಗೆಲುವು ಸಾಧಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕು.

Related Articles

Back to top button
error: Content is protected !!