50 ವರ್ಷದ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ಪರಸ್ಪರ ಪ್ರೀತಿ: ಮದುವೆಗೆ ವಿರೋಧಿಸಿದಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ

Views: 328
ತುಮಕೂರು, 50 ವರ್ಷದ ವಿವಾಹಿತ ವ್ಯಕ್ತಿ ಹಾಗೂ ಕಾಲೇಜು ವಿದ್ಯಾರ್ಥಿನಿ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ವಿವಾಹಿತ ವ್ಯಕ್ತಿ ರಂಗಶಾಮಣ್ಣ (50) ಆತ್ಮಹತ್ಯೆ ಮಾಡಿಕೊಂಡವರು.
ಕಾಲೇಜು ವಿದ್ಯಾರ್ಥಿನಿ ಅನನ್ಯ ಹಾಗೂ ರಂಗಶಾಮಣ್ಣ ಇಬ್ಬರು ಕೆಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಮದುವೆಯಾಗಬೇಕೆಂದು ಕೊಂಡ ಈ ಜೋಡಿ ತಮ್ಮ ಪ್ರೀತಿಯ ಬಗ್ಗೆ ತಮ್ಮ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇವರ ನಡುವಿನ ವಯಸ್ಸಿನ ಅಂತರ ನೋಡಿ ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಿ ಬುದ್ಧಿ ಹೇಳಿದ್ದರು. ಅಲ್ಲದೇ ರಂಗಶಾಮಣ್ಣ ವಿವಾಹಿತನಾಗಿದ್ದು, ಈ ಮದುವೆ ಸಾಧ್ಯವಿಲ್ಲ ಎಂದು ಮನೆಯಲ್ಲಿ ನಿರಾಕರಿಸಿದ್ದರು.
ಇದರಿಂದ ಮನನೊಂದ ಈ ಜೋಡಿ ಕಳೆದ 4 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಅನನ್ಯ ಹಾಗೂ ರಂಗಶಾಮಣ್ಣ ಇಬ್ಬರು ಕಣ್ಮರೆಯಾಗುತ್ತಿದ್ದಂತೆ ಪೋಷಕರು ಹುಡುಕಾಟ ನಡೆಸಿದ್ದಾರೆ. ನಿನ್ನೆ ಮಾವತ್ತೂರು ಕೆರೆಯ ದಡ ಮೇಲೆ ಇಬ್ಬರ ಚಪ್ಪಲಿ ಹಾಗೂ ಮೊಬೈಲ್ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಿ ಹುಡುಕಾಟ ಆರಂಭಿಸಲಾಗಿತ್ತು.
ಇಂದು ಭಾನುವಾರ ಬೆಳಗ್ಗೆ ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಹೊರ ತೆಗೆದಿದ್ದಾರೆ. ಅನನ್ಯ ಹಾಗೂ ರಂಗಶಾಮಣ್ಣ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಗೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






