ಇತರೆ

7 ತಿಂಗಳ ಗರ್ಭಿಣಿ ಪ್ರೇಯಸಿ ಕೊಂದು ಹೂತು ಹಾಕಿದ ಪ್ರಿಯತಮ!

Views: 125

ಕನ್ನಡ ಕರಾವಳಿ ಸುದ್ದಿ: ಮದುವೆಗೆ ಬೇಡಿಕೆ ಇಟ್ಟಿದ್ದಕ್ಕೆ 7 ತಿಂಗಳ ಗರ್ಭಿಣಿ ಪ್ರೇಯಸಿಯನ್ನು ಪ್ರಿಯತಮ ತನ್ನ ಗೆಳೆಯರ ಜೊತೆಗೂಡಿ ಕೊಂದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ. ಇದೀಗ, ಯುವತಿ ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿಯ ನಂಗ್ಲೋಯ್‌ ಪ್ರದೇಶದ 19 ವರ್ಷದ ಯುವತಿ ಸಂಜು ಅಲಿಯಾಸ್ ಸಲೀಮ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು. ಹೀಗಾಗಿ ತನ್ನನ್ನು ವಿವಾಹವಾಗುವಂತೆ ಆಕೆ ಸಲೀಮ್ನನ್ನು ಕೇಳಿದ್ದಾಳೆ. ಆದರೆ, ಸಲೀಮ್ ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾನೆ. ಇದಕ್ಕೆ ಯುವತಿ ಒಪ್ಪಿಗೆ ನೀಡಿಲ್ಲ. ಇದೇ ವಿಚಾರ ಇಬ್ಬರ ಮಧ್ಯೆ ಆಗಾಗ್ಗೆ ಜಗಳಕ್ಕೂ ಕಾರಣವಾಗಿತ್ತು.

ವಿವಾಹಕ್ಕೆ ಪ್ರೇಯಸಿ ಹಠ ಹಿಡಿದ ಕಾರಣ, ಆರೋಪಿ ಸಲೀಮ್ ಆಕೆಯನ್ನು ಹತ್ಯೆ ಮಾಡುವ ಸ್ಕೆಚ್ ರೂಪಿಸಿದ್ದಾನೆ. ಅದರಂತೆ, ಇಬ್ಬರು ಗೆಳೆಯರಾದ ಪಂಕಜ್ ಮತ್ತು ರಿತಿಕ್ರ ಸಹಾಯ ಕೋರಿದ್ದಾನೆ. ಅಕ್ಟೋಬರ್ 21 ರಂದು ಕರ್ವಾ ಚೌತ್ ದಿನದಂದು ಯುವತಿಯ ಜೊತೆ ಸಲೀಮ್ ಮತ್ತೆ ಕಿತ್ತಾಡಿದ್ದಾನೆ. ನಂತರ, ಆಕೆಯನ್ನು ಮನೆ ಬಿಟ್ಟು ಬರುವಂತೆ ಸೂಚಿಸಿದ್ದಾನೆ. ಇದನ್ನು ನಂಬಿದ ಪ್ರೇಯಸಿ ತನ್ನ ವಸ್ತುಗಳೊಂದಿಗೆ ಸಲೀಮ್ ಜೊತೆ ಬಂದಿದ್ದಾಳೆ.

ಸಲೀಮ್ ತನ್ನ ಸಹಚರರಾದ ಪಂಕಜ್ ಮತ್ತು ರಿತಿಕ್ ಜೊತೆಗೂಡಿ ಕಾರು ಬಾಡಿಗೆಗೆ ಪಡೆದು ಆಕೆಯನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಮೂವರೂ ಸೇರಿ ಆಕೆಯನ್ನು ಕೊಂದು ಶವವನ್ನು ನಾಲ್ಕು ಅಡಿ ಆಳದ ಗುಂಡಿ ತೋಡಿ ಅದರಲ್ಲಿ ಹೂತು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

 

Related Articles

Back to top button
error: Content is protected !!