ಮಹಾಕುಂಭ ಮೇಳದ ಬೆಡಗಿಗೆ ಸ್ಟಾರ್ ಮಾಡಲು ಹೊರಟಿದ್ದ ನಿರ್ದೇಶಕ ಆರೆಸ್ಟ್, ‘ಮೊನಾಲಿಸಾ’ ಸೂಪರ್ ಸ್ಟಾರ್ ಕನಸು ಛಿದ್ರ!

Views: 289
ಕನ್ನಡ ಕರಾವಳಿ ಸುದ್ದಿ: ಮೊನ್ನೆ ಮೊನ್ನೆ ಮುಕ್ತಾಯವಾದ ಮಹಾಕುಂಭ ಮೇಳದಲ್ಲಿ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮಣಿ ಮಾರುವ ಹುಡುಗಿ ಮೊನಾಲಿಸಾ ನಿಮಗೆ ನೆನಪಿರಬೇಕು. ಕೇವಲ 24 ಗಂಟೆಗಳಲ್ಲಿ ಅಖಂಡ ಭಾರತದೆಲ್ಲೆಡೆ ಮನೆ ಮಾತಾದ ಈ ಮೊನಾಲಿಸಾ ಮುಗ್ದತೆಯನ್ನು ಬಳಸಿಕೊಂಡು ವಂಚಿಸುವ ಕೆಲಸಕ್ಕೆ ಅನೇಕರು ಮುಂದಾಗಿದ್ದರು. ನಾನಾ ಕಸರತ್ತುಗಳನ್ನು ಮಾಡಿದರು. ಆ ಪೈಕಿ ಈ ಸನೋಜ್ ಮಿಶ್ರಾ ಕೂಡ ಒಬ್ಬರು.
ರೋಡ್‌ನಲ್ಲಿದ್ದವಳನ್ನು ಸ್ಟಾರ್ ಮಾಡುವುದಾಗಿ ಹೇಳಿ, ಆ ಹುಡುಗಿಯ ತಲೆಯನ್ನೆಲ್ಲಾ ಕೆಡಿಸಿ ಆಕೆಯ ಹೆಸರಿನಲ್ಲಿ ಪುಕ್ಸಟ್ಟೆ ಪ್ರಚಾರವನ್ನು ಪಡೆದ ಸನೋಜ್ ಮಿಶ್ರಾ ತಮ್ಮ ಈ ಚಿತ್ರಕ್ಕೆ ‘ ದಿ ಡೈರಿ ಆಫ್ ಮಣಿಪುರ್’ ಎಂಬ ಟೈಟಲ್ ಇಟ್ಟಿದ್ದರು. ಸನೋಜ್ ಮಿಶ್ರಾ ಅವರ ಇತಿಹಾಸ ಗೊತ್ತಿದ್ದ ಅನೇಕರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು. ಯೂಟ್ಯೂಬ್ ವಿಡಿಯೋ ಮೂಲಕ ಈ ನಿರ್ದೇಶಕನ ಜನ್ಮವನ್ನೇ ಜಾಲಾಡಿದರು. ಇವನೊಬ್ಬ ಡೋಂಗಿ ನಿರ್ದೇಶಕ ಈತ ನಿರ್ದೇಶಿಸಿರುವ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಎಂದು ಹೇಳಿದರು. ಇಂತಹ ವ್ಯಕ್ತಿ ಜೊತೆ ಏನೂ ಅರಿಯದ 16 ವರ್ಷ ವಯಸ್ಸಿನ ಮೊನಾಲಿಸಾ ಚಿತ್ರ ಮಾಡಿದರೆ ಆಕೆಯ ಭವಿಷ್ಯ ಹಾಳಾಗಿ ಹೋಗುತ್ತೆ ಎಂದು ಅಲವತ್ತುಕೊಂಡರು. ಆದರೆ, ಇವರ ಮಾತನ್ನು ಅನೇಕರು ನಂಬಲಿಲ್ಲ. ಬದಲಿಗೆ ತನ್ನ ಮೇಲೆ ಮಾಡಲಾದ ಈ ಆರೋಪಗಳಿಂದ ಕೆರಳಿದ ಸನೋಜ್ ಮಿಶ್ರಾ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು.
ಯೂಟ್ಯೂಬ್ ಮೂಲಕ ತಮ್ಮ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರನ್ನು ಸನೋಜ್ ಮಿಶ್ರಾ ನೀಡಿದ್ದರು.ಮೊನಾಲಿಸಾ ಅವರ ಉಜ್ವಲ ಭವಿಷ್ಯಕ್ಕೆ ಕಲ್ಲು ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಸನೋಜ್ ಮಿಶ್ರಾ ನೀಡಿದ ದೂರಿನ ಅನ್ವಯ 5 ಜನರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಆರೋಪ ಗಂಭೀರವಾದ ಹಿನ್ನೆಲೆ ನಾಯಕಿಯಾಗುವ ಮೊನಾಲಿಸಾ ಅವರ ಕನಸು ಛಿದ್ರವಾಯಿತು ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಸನೋಜ್ ಮಿಶ್ರಾ ಅವರಂತಹ ವ್ಯಕ್ತಿಗಳಿಂದ ಇಡೀ ಚಿತ್ರರಂಗ ಮುಜುಗರಕ್ಕೊಳಗಾಗಬೇಕಾಗುತ್ತೆ ಅವಮಾನ ಎದುರಿಸಬೇಕಾಗುತ್ತೆ ಎಂದು ಕೂಡ ಕಿಡಿ ಕಾರುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ಚಿತ್ರರಂಗಕ್ಕೆ ಬರುವ ಕನಸೊತ್ತು ಅನೇಕ ಯುವತಿಯರು ಹಿಂದೆ ಮುಂದೆ ಯೋಚನೆ ಮಾಡುವಂತಾಗಿದೆ ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಮೊನಾಲಿಸಾ ಈ ಹಿಂದೆ ನೀಡಿದ ಸಂದರ್ಶನದಲ್ಲಿ ತಮಗೆ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುವ ಆಸೆ ಇದೆ ಎಂದು ಹೇಳಿದ್ದರು. ಕುಂಭ ಮೇಳದಲ್ಲಿ ಇವರ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಯಾರಾದರೂ ನಿಮ್ಮನ್ನು ಚಿತ್ರದ ನಾಯಕಿಯನ್ನಾಗಿ ಮಾಡುವುದಾಗಿ ಹೇಳಿ ಅವಕಾಶವನ್ನು ನೀಡಿದರೆ ನೀವೇನು ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿದ್ದ ಮೊನಾಲಿಸಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದಾಗಿ ಹೇಳಿದ್ದರು. ಐಶ್ವರ್ಯ ರೈ ಅವರಂತೆ ಮಿಂಚುವ ಆಸೆ ಇದೆ ಎಂದು ಹೇಳಿದ್ದರು.
ನಂಬಿಸಿ ಮೋಸ ಮಾಡಿದ ನಿರ್ದೇಶಕ ಆರೆಸ್ಟ್
ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ, ಯುವತಿಯೊಬ್ಬರ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವ ಆರೋಪದಡಿ ಮಿಶ್ರಾ ಅವರನ್ನು ಬಂಧಿಸಲಾಗಿದೆ. ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಸನೋಜ್ ಮಿಶ್ರಾ ಅವರನ್ನು ಭಾನುವಾರ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸನೋಜ್ ಮಿಶ್ರಾ ತನ್ನನ್ನು ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ, ನಾಲ್ಕು ವರ್ಷ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಮೂರು ಭಾರಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ 28 ವರ್ಷದ ಯುವತಿಯೊಬ್ಬರು ದೂರು ದಾಖಲಿಸಿದ್ದರು.
ಇದರ ವಿರುದ್ಧ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ