2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ: ಆರೋಗ್ಯ ಇಲಾಖೆ ಆದೇಶ

Views: 101
ಕನ್ನಡ ಕರಾವಳಿ ಸುದ್ದಿ: ಮಕ್ಕಳು ಕೆಮ್ಮು, ಶೀತದಿಂದ ಬಳಲುತ್ತಿದ್ದರೆ ಮಕ್ಕಳಿಗೆ ಸಿರಪ್ ನೀಡುವುದು ಸಾಮಾನ್ಯ. ಆದರೆ ಹೀಗೆ ಸಿರಪ್ ಸೇವಿಸಿದ್ದ ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿರುವ ಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾದಲ್ಲಿ ಈವರೆಗೆ 11 ಮಕ್ಕಳು ಕೆಮ್ಮಿನ ಸಿರಪ್ ನಿಂದ ಬಲಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ 9 ಮಕ್ಕಳು ಹಾಗೂ ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಮೃತಪಟ್ಟಿದ್ದಾರೆ.
ಮಕ್ಕಳು ಶೀತ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಈ ವೇಳೆ ವೈದ್ಯರ ಸಲಹೆಯಂತೆಯೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಲಾಗಿದೆ. ಈ ಸಿರಪ್ ಸೇವಿಸಿದ ಬಳಿಕ ಮಕ್ಕಳಿಗೆ ಇನ್ನಷ್ಟು ಆರೋಗ್ಯ ಹದಗೆಟ್ಟಿದೆ. ಮಕ್ಕಳಿಗೆ ಮೂತ್ರ ಬಂದ್ ಆಗಿದ್ದು, ಮೈಯಲ್ಲಿ ಊತ ಕಾಣಿಸಿಕೊಂಡಿದೆ. ಮೂತ್ರಪಿಂಡದ ಸಮಸ್ಯೆಯಿಂದ ಮಕ್ಕಳು ಬಳಲಾರಂಭಿಸಿದ್ದು, ಕೊನೆಗೆ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಎರಡೂ ರಾಜ್ಯಗಳಲ್ಲಿಯೂ ಸಿರಪ್ ಸೇವಿಸಿದ್ದ ಮಕ್ಕಳು ಕಿಡ್ನಿ ಫೇಲ್ ಆಗಿ ಮೃತಪಟ್ಟಿರುವುದು ಖಚಿತವಾಗಿದೆ.
11 ಮಕ್ಕಳ ಸಾವಿನ ಬಳಿಕ ಇದೀಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಎಲ್ಲಾ ರಾಜ್ಯಗಳಿಗೂ ಮಕ್ಕಳಿಗೆ ಕೆಮ್ಮು, ನೆಗಡಿ ಔಷಧ ನೀಡುವ ಮುನ್ನ ಎಚ್ಚರವಿರಲಿ ಎಂದು ಸೂಚಿಸಿದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು, ಶೀತಗಳ ಸಿರಪ್ ನೀಡುವಂತಿಲ್ಲ. ಸಿರಪ್ ಸೇವಿಸದೆಯೂ ಮಕ್ಕಳಲ್ಲಿ ಕೆಮ್ಮು ಕ್ರಮೇಣ ಕಡಿಮೆಯಾಗುತ್ತದೆ. ಕೆಮ್ಮಿನ ಸಿರಪ್ ಮಾದರಿಗಳ ಪರೀಕ್ಷೆಗಳು ಡೈಥಿಲೀನ್ ಗ್ಲೈಕಾಲ್ ಅಥವಾ ಎಥಿಲಿನ್ ಗ್ಲೈಕಾಲ್ ನ್ನು ಒಳಗೊಂಡಿಲ್ಲ. ಇದು ಗಂಭೀರವಾದ ಕಿಡ್ನಿ ಸಮಸ್ಯೆಯನ್ನು ಉಂಟುಮಾಡುವ ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ ಎಂದು ತಿಳಿಸಿದೆ.
ಎರಡು ವರ್ಷಗಳ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ. ಇವುಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವೈದ್ಯರು ಶಿಫಾರಸು ಮಾಡಬಾರದು. 5ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸೂಕ್ತ ಡೋಸೆಜ್ ಗೆ ಅನುಗುಣವಾಗಿ ಶಿಫಾರಸು ಮಾಡಬೇಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಸುನಿತಾ ಶರ್ಮಾ ಎಲ್ಲಾ ರಾಜ್ಯಗಳಿಗೂ ಸೂಚಿಸಿದ್ದಾರೆ.