ಬಿಪಿಎಲ್‌ಗೆ ವಿದ್ಯುತ್ ಶಾಕ್..!! 150 ಯೂನಿಟ್ ದಾಟಿದರೆ ಬಿಪಿಎಲ್ ಕಾರ್ಡ್ ರದ್ದು

Views: 159
ಕನ್ನಡ ಕರಾವಳಿ ಸುದ್ದಿ : ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಇದೀಗ ಈ ಯೋಜನೆಗಳ ಅನುಷ್ಠಾನಕ್ಕಾಗಿ ಲಭ್ಯವಿರುವ ಸಂಪನ್ಮೂಲ ಕ್ರೋಢೀಕರಿಸಲು ಪರದಾಡುತ್ತಿದೆ.
ರಾಜ್ಯ ಸರ್ಕಾರ ಇದೀಗ ಹೊಸ, ಹೊಸ ಮಾರ್ಗಗಳ ಮೂಲಕ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ.
ಗೃಹಜ್ಯೋತಿ ಯೋಜನೆಯಡಿ ಮಾಸಿಕ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಫಲಾನುಭವಿ ಗ್ರಾಹಕರಿಗೆ ವಿದ್ಯುತ್ ಶುಲ್ಕ ಇರುವುದಿಲ್ಲ. ಹೀಗಾಗಿ ಗ್ರಾಹಕರು ಸರಾಸರಿ ಬಳಕೆ ವಿದ್ಯುತ್ತನ್ನು ಮಾನದಂಡವಾಗಿಟ್ಟುಕೊಂಡು ಪ್ರತಿ ತಿಂಗಳಿಗೆ ಗರಿಷ್ಠ ಬಳಕೆ ಮಿತಿಯನ್ನು ವಿಧಿಸಲಾಗಿದೆ.
ಹೀಗಾಗಿ ಫಲಾನುಭವಿ ಗ್ರಾಹಕರು ಬಳಸುವ ವಿದ್ಯುತ್ ಮಿತಿಯನ್ನು ದಾಟಿದ ನಂತರ 200 ಯೂನಿಟ್ ವಿದ್ಯುತ್‌ನವರೆಗೆ ಹೆಚ್ಚುವರಿ ಬಳಕೆಗೆ ಮಾತ್ರ ಶುಲ್ಕ ನೀಡಬೇಕು. ಅದನ್ನು ಬಿಟ್ಟು ಇನ್ನೂರು ಯೂನಿಟ್ ದಾಟಿದ ನಂತರ ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕಾಗಿದೆ.
ಇದೀಗ, ಬಿ.ಪಿ.ಎಲ್. ಕಾರ್ಡುಗಳ ಪರಿಷ್ಕರಣೆಗೆ ವಿದ್ಯುತ್ ಬಳಕೆಯನ್ನು ಮಾನದಂಡ ವಾಗಿರಿಸಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ದೇಶದಲ್ಲೇ ಅತ್ಯಧಿಕ ಪ್ರಮಾಣದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಇದೀಗ ಕಾರ್ಡು ಪರಿಷ್ಕರಣೆಗೆ ಹೊಸ ನಿಯಮವೊಂದನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಅನ್ವಯ ಇನ್ನು ಮುಂದೆ ಮಾಸಿಕ 150 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರನ್ನು ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ಕಾರ್ಡುದಾರ ಕುಟುಂಬವು ಮಾಸಿಕ 150 ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಅವರಿಗೆ ಬಿಪಿಎಲ್ ಕಾರ್ಡ್ ಅನ್ವಯ ದೊರೆಯುತ್ತಿರುವ ಉಚಿತ ಪಡಿತರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರ, 3 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರಮಾಣದ ಜಮೀನಿರುವ ಕುಟುಂಬ, ಒಂದಕ್ಕಿಂತ ಹೆಚ್ಚು ವಾಣಿಜ್ಯ ಬಳಕೆ ವಾಹನಗಳನ್ನು ಹೊಂದಿರುವ ಕುಟುಂಬಗಳನ್ನು ಬಿ.ಪಿ.ಎಲ್. ವ್ಯಾಪ್ತಿಯಿಂದ ಹೊರಗಿಡಲು ಪರಿಗಣಿಸಲಾಗುತ್ತಿತ್ತು ಅದರ ಸಾಲಿಗೆ ಇದೀಗ ಮಾಸಿಕ 150 ಯೂನಿಟ್ ವಿದ್ಯುತ್ ಬಳಸುವ ಕುಟುಂಬಗಳು ಸೇರ್ಪಡೆಯಾಗಲಿವೆ.