ಕರಾವಳಿ
ಹುಲ್ಲು ಕತ್ತರಿಸಲು ಹೋದ ಕೃಷಿಕನ ಮೇಲೆ ಚಿರತೆ ದಾಳಿ

Views: 78
ಮಂಗಳೂರು: ಕಿನ್ನಿಗೋಳಿ ಸಮೀಪದ ಎಳತ್ತೂರು ದೇವಸ್ಧಾನದ ದೇವರ ಗುಂಡಿ ಸಂಕದ ಬಳಿ ಚಿರತೆಯೊಂದು ಹುಲ್ಲು ಕತ್ತರಿಸುತ್ತಿದ್ದ ರೈತನ ಮೇಲೆ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಕಟೀಲು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡ ಸ್ಧಳೀಯ ನಿವಾಸಿ ಲಿಗೋರಿ (58) ಎಂದು ಗುರುತಿಸಲಾಗಿದೆ.
ಗಾಯಾಳು ಲಿಗೋರಿ ಕೃಷಿಕರಾಗಿದ್ದು, ದನಗಳಿಗೆ ಮೇವು ತರಲು ಹೋದಾಗ ಈ ಘಟನೆ ನಡೆದಿದ್ದು ಲಿಗೋರಿ ಅವರು ಧೈರ್ಯದಿಂದ ಚಿರತೆಯನ್ನು ಎದುರಿಸಿದ್ದು ಕೂಡಲೇ ಚಿರತೆ ಸ್ಧಳದಿಂದ ಪಲಾಯನಗೈದಿದೆ ಎನ್ನಲಾಗಿದೆ.
ಚಿರತೆ ದಾಳಿಯಿಂದ ಲಿಗೋರಿಯವರ ಮುಖಕ್ಕೆ ಕೈಗೆ ಕಾಲಿಗೆ ಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪವಾಡಸದೃಶ ಪಾರಾಗಿದ್ದಾರೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಚಿರತೆ ಓಡಾಟದ ಬಗ್ಗೆ ಜನರು ಅಲರ್ಟ್ ಆಗಿದ್ದು, ಎಳತ್ತೂರು ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಕೃಷಿಕರು ನೆಲೆಸಿದ್ದು, ಚಿರತೆ ದಾಳಿ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.