ಹಸೆಮಣೆ ಏರಬೇಕಿದ್ದ ಯುವತಿ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ನಾಪತ್ತೆ!
Views: 61
ಕನ್ನಡ ಕರಾವಳಿ ಸುದ್ದಿ: ಹಸೆಮಣೆ ಏರಬೇಕಿದ್ದ ಯುವತಿ ಮದುವೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಾಗ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿ ನಗರದ ನಿವಾಸಿ ಸೀಫಾ ಖಾನ್ ನಾಪತ್ತೆಯಾಗಿರುವ ಯುವತಿ. ಎಂಬಿಬಿಎಸ್ ಓದುತ್ತಿದ್ದ ಯುವಕನೊಂದಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ಶಿರಸಿಯ ಮದುವೆ ಹಾಲ್ ನಲ್ಲಿ ವಿವಾಹ ಏರ್ಪಾಡಾಗಿತ್ತು. ಕುಟುಂಬಸ್ಥರೆಲ್ಲರೂ ಮದುವೆಯ ಸಿದ್ಧತೆಯಲ್ಲಿ ಬ್ಯುಸಿ ಇದ್ದರು. ವಧುವನ್ನು ರೆಡಿ ಮಾಡಲು ಆಕೆಯ ಕೋಣೆಗೆ ಹೋಗಿ ನೋಡಿದಾಗ ಯುವತಿ ಇರಲಿಲ್ಲ. ಎಷ್ಟೇ ಹುಡುಕಿದರೂ ಯುವತಿ ಕಾಣ ಸಿಗದಿದ್ದಾಗ ಕುಟುಂಬಕ್ಕೆ ಆಘಾತವಾಗಿದೆ.
ಇನ್ನು ಸೀಫಾ ಖಾನ್, ಎಂಬಿಬಿಎಸ್ ಓದುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಆತನೊಂದಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಅವರ ಪ್ರೀತಿಯನ್ನು ಒಪ್ಪಿರಲಿಲ್ಲ. ಇಂದು ಬೇರೆಯವರ ಜೊತೆ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ಅಷ್ಟರಲ್ಲಿ ಯುವತಿ ನಾಪತ್ತೆ ಆಗಿದ್ದಾಳೆ. ಸದ್ಯ ಮಗಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ಝಹೀರ್ ಖಾನ್ ಶಿರಸಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.






