ರಾಜಕೀಯ

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್, ಜಮ್ಮು- ಕಾಶ್ಮೀರದಲ್ಲಿ ‘ಕೈ’ ಮೈತ್ರಿಗೆ ಅಧಿಕಾರ

Views: 92

ಹರಿಯಾಣದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ, ಜಮ್ಮು- ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಈಗ ಎಲ್ಲವೂ ಸುಳ್ಳಾಗಿವೆ. ಪ್ರಕಟವಾಗುತ್ತಿರುವ ಫಲಿತಾಂಶದ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಇತ್ತ ಕೇಂದ್ರಾಡಳಿತ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಸ್ಪಷ್ಟ ಬಹುಮತದತ್ತ ದಾಪುಗಾಲಿಟ್ಟಿದೆ.

ಇಂಡಿಯಾ ಟುಡೇ-ಸಿ ವೋಟರ್, ರಿಪಬ್ಲಿಕ್ ಮ್ರಾಟ್ರಿಝ್, ರಿಪಬ್ಲಿಕ್ ಪಿಮಾರ್ಕ್, ಎಕ್ಸಿಸ್ ಮೈ ಇಂಡಿಯಾ, ಪೀಪಲ್ಸ್ ಪಲ್ಸ್ ಸೇರಿದಂತೆ ಬಹುತೇಕ ಸಮೀಕ್ಷೆಗಳು ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ 45ರಿಂದ 60 ಸ್ಥಾನಗಳನ್ನು ಪಡೆಯುತ್ತದೆ. ಬಿಜೆಪಿ 18ರಿಂದ 32 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದ್ದವು. ಅಂದರೆ, ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಲಿವೆ. ಕಾಂಗ್ರೆಸ್ ನಿಚ್ಚಳ ಬಹುಮತ ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಆದರೆ, ಫಲಿತಾಂಶ ಹೊರಬೀಳುತ್ತಿರುವಂತೆಯೇ ಎಲ್ಲವೂ ಉಲ್ಟಾ ಆಗಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. 90 ಸ್ಥಾನಗಳಲ್ಲಿ ಬಿಜೆಪಿ 50ರಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 35 ಸ್ಥಾನಗಳಿಗೆ ಸೀಮಿತವಾಗಿದೆ. ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 46 ಆಗಿದೆ.

ಕಣಿವೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಸ್ಪಷ್ಟ ಬಹುಮತ: ಇನ್ನೂ, ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ಬರುವುದು ನಿಚ್ಚಳವಾಗಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷಗಳ ಮೈತ್ರಿಯು 90 ಸ್ಥಾನಗಳಲ್ಲಿ 49 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವಿನ ಸನಿಹದಲ್ಲಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಣಿವೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಇಲ್ಲಿಯೂ ಭವಿಷ್ಯ ಸುಳ್ಳಾಗಿದೆ. ಬಿಜೆಪಿ 29 ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಈ ಮೂಲಕ ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ ಸತತವಾಗಿ ಉಲ್ಟಾ ಆಗುತ್ತಿವೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಏಕಪಕ್ಷವಾಗಿ ಬಹುಮತ ಪಡೆಯಲಿದೆ. ಎನ್ಡಿಎ ಮೈತ್ರಿಕೂಟಕ್ಕೆ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಎಲ್ಲವೂ ಬುಡಮೇಲಾಗಿತ್ತು. ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ.

Related Articles

Back to top button
error: Content is protected !!