ಸ್ಕೂಟಿ ಬಸ್ಸಿನಡಿಗೆ ಸಿಲುಕಿ ಬಿದ್ದು ಸವಾರ ಮೃತ್ಯು
Views: 216
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕೋತಲಕಟ್ಟೆ ಬಳಿ ಸೋಮವಾರ ಮಧ್ಯಾಹ್ನ ಸ್ಕೂಟಿ ಬಸ್ಸಿನಡಿಗೆ ಬಿದ್ದು ಸವಾರ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಮೂಳೂರು ನಿವಾಸಿ, ಪ್ರಸ್ತುತ ಉಡುಪಿ ಪಡುಕೆರೆಯಲ್ಲಿ ವಾಸವಿರುವ ಕೃಷ್ಣರಾಜ್ ಅಮೀನ್ (47) ಮೃತ ವ್ಯಕ್ತಿ.
ಮೃತ ಕೃಷ್ಣರಾಜ್ ಮೀನುಗಾರಿಕಾ ಕಸುಬು ಮಾಡಿಕೊಂಡಿದ್ದು ಇಡೀ ಕುಟುಂಬಕ್ಕೆ ಆಸರೆಯಾಗಿದ್ದರು. ಅವರು ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಉಡುಪಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್, ಪಾಂಗಾಳ ಡಿವೈಡರ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಬಸ್ಸಿನಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಬಸ್ಸಿನ ನ ಮುಂಭಾಗದ ಗಾಜು ಸಂಪೂರ್ಣ ಪುಡಿಯಾಗಿದೆ.
ತೀವ್ರ ಗಾಯಗೊಂಡು ನರಳಾಡುತ್ತಿದ್ದ ಗಾಯಾಳು ಕೃಷ್ಣರಾಜ್ ಅವರನ್ನು ಮೂಳೂರಿನ ಎಸ್.ಡಿ.ಪಿ.ಐ ಅಂಬುಲೆನ್ಸ್ ಮೂಲಕವಾಗಿ ಸಮಾಜ ಸೇವಕ ಜಲಾಲುದ್ದೀನ್ ಮತ್ತು ಚಾಲಕ ಹಮೀದ್ ಅವರು ಸ್ಥಳೀಯರ ಸಹಕಾರದೊಂದಿಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೃದ್ಯರು ಗಾಯಾಳು ಮೃತಟ್ಟಿರುವುದಾಗಿ ತಿಳಿಸಿದ್ದಾರೆ. ಮೃತ ದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.






