ಕರಾವಳಿ

ಸಾಸ್ತಾನ, ಹೆಜಮಾಡಿ ಟೋಲ್‌ನಲ್ಲಿ ಸುಂಕ ವಿನಾಯಿತಿಗಾಗಿ ನಕಲಿ ಆರ್‌ಸಿ ತಯಾರಿಸಿ ವಂಚನೆ

Views: 94

ಉಡುಪಿ: ಸಾಸ್ತಾನ, ಹೆಜಮಾಡಿ ಟೋಲ್‌ನಲ್ಲಿ ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ತಯಾರಿಸಿ ಸಂಸ್ಥೆಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ಸಾಸ್ತಾನ ಟೋಲ್‌ನಲ್ಲಿ ಕರಿಕಲ್‌ ಕಟ್ಟೆಯಿಂದ ಮಾಬುಕಳದವೆರೆಗೆ ಇರುವ ಸ್ಥಳೀಯ ನಿವಾಸಿಗಳಿಗೆ ಸುಂಕ ವಿನಾಯಿತಿ ನೀಡಲಾಗಿದ್ದು, ಬಲೆನೋ ಕಾರೊಂದರ ಆರ್‌ಸಿ ಸ್ಕ್ಯಾನರ್‌ನಲ್ಲಿ ಪರಿಶೀಲಿಸಿದಾಗ ಆರ್‌ಸಿ ವಿಳಾಸದಲ್ಲಿ ಅಹಮ್ಮದ್‌ ಸಾಹೇಬ ಪಡುಕರೆ ಕೋಟ ಎಂಬುದಾಗಿ ಇದೆ, ಆರ್‌ಸಿ ಪ್ರತಿ ಎಡಿಟ್‌ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ಕಾರಿನ ಆರ್‌ಸಿ ಮಾಲಕರ ವಿಳಾಸ ಕಾಳಾವರ ಗ್ರಾಮ ಕುಂದಾಪುರ ತಾಲೂಕು ಎಂದಿದ್ದು, ಅನುಮಾನಗೊಂಡು ನಂತರ ಹೆಜಮಾಡಿ ಟೋಲ್‌ನಲ್ಲಿ ಪರಿಶೀಲಿಸಿದಾಗ ಅಲ್ಲಿಯೂ ಸಹ ಸ್ಥಳೀಯ ವಿಳಾಸದ ಆರ್‌ಸಿ ನೀಡಿ ವಿನಾಯಿತಿ ಪಡೆದಿರುವುದು ಕಂಡುಬಂದಿದೆ.

ಆರೋಪಿಯು ಟೋಲ್‌ನಲ್ಲಿ ಸುಂಕ ವಿನಾಯಿತಿ ಪಡೆಯುವ ಉದ್ದೇಶದಿಂದ ಕಾರಿನ ಆರ್‌ಸಿಯ ವಿಳಾಸವನ್ನು ಬದಲಾಯಿಸಿ ಆರ್‌ಸಿಯಲ್ಲಿರುವ ವಿಳಾಸ ತನ್ನ ಸ್ವಂತ ವಿಳಾಸ ಎಂದು ಬಿಂಬಿಸಿ ನಕಲಿ ಆರ್‌ಸಿ ತಯಾರಿಸಿ ಟೋಲ್‌ ಸಂಸ್ಥೆಗೆ ಮೋಸ ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!