ಸಾಸ್ತಾನ ಟೋಲ್ ಸ್ಥಳೀಯರಿಗೆ ಸುಂಕ ವಿನಾಯಿತಿ

Views: 93
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ ಸಾಸ್ತಾನ ಸುಂಕ ವಸೂಲಾತಿ ಸ್ಥಳೀಯ ವಾಹನಗಳಿಗೆ ಈ ಹಿಂದೆ ನೀಡುತ್ತಿದ್ದ ರಿಯಾಯಿತಿ ಮುಂದುವರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೋಲ್ ಗಳಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ವಿಚಾರದ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಸ್ತಾನ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವು ಸಾಲಿಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು ಸ್ಥಳೀಯ ಜನರು ಸುಂಕ ವಸೂಲಾತಿ ಕೇಂದ್ರದ ಸುತ್ತಮುತ್ತ ವಾಸವಾಗಿದ್ದಾರೆ. ದೈನಂದಿನ ಪ್ರತಿಯೊಂದು ಕಾರ್ಯಕ್ಕೂ ಟೋಲನ್ನು ದಾಟುವ ಪ್ರಸಂಗ ಒದಗಿ ಬರಲಿದ್ದು, ಪ್ರತಿ ಬಾರಿಯೂ ಶುಲ್ಕ ಪಾವತಿ ಮಾಡಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ಖಾಸಗಿ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಬೇಕು ಎಂದರು.

ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ರೂ.1752 ವಾಹನಗಳಿಗೆ ಆ ಪೈಕಿ 606 ವಾಹನಗಳಲ್ಲಿ 421 ಕಾರುಗಳು 182 ಲಾರಿ ಟಿಪ್ಪರ್ ಗಳು 12616 ಟ್ರಿಪ್ ಮಾಡುತ್ತಿವೆ. ಇದಕ್ಕೆ ಶುಲ್ಕ ವಿನಾಯಿತಿ ನೀಡುವಂತೆ ಸ್ಥಳೀಯರು ಅಗ್ರಹಿಸಿದ್ದರು. ಆದರೆ ಇದರಿಂದಾಗಿ ಮಾಸಿಕ ಸುಮಾರು 26 ಲಕ್ಷ ಉಂಟಾಗಲಿದೆ ಎಂಬುದನ್ನು ಗುತ್ತಿಗೆ ಸಂಸ್ಥೆಯವರು ವಾದಿಸಿದರು. ಬಳಿಕ ಹಲವು ಸುತ್ತಿನ ಮಾತುಕತೆ ನಡೆದು ಒಪ್ಪಿಗೆ ಸೂಚಿಸಲಾಯಿತು.
ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ಅರುಣ್, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳು, ತಹಶೀಲ್ದಾರ್ ಗಳಾದ ಪ್ರತಿಭಾ, ಶ್ರೀಕಾಂತ್, ಗುತ್ತಿಗೆದಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






