ಸಾರ್ವಜನಿಕ ಗಣೇಶೋತ್ಸವಕ್ಕೆ ಮೆಸ್ಕಾಂ ಸುರಕ್ಷತಾ ಗೈಡ್‌ಲೈನ್ಸ್ ಬಿಡುಗಡೆ

Views: 87
ಕನ್ನಡ ಕರಾವಳಿ ಸುದ್ದಿ ಮಂಗಳೂರು:ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವಂತೆ ಮೆಸ್ಕಾಂ ಸುರಕ್ಷತಾ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.
ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಸಂಬಂಧಪಟ್ಟ ಮೆಸ್ಕಾಂ ಉಪವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ವಿದ್ಯುತ್ ಸಂಪರ್ಕಕ್ಕೆ ಅನುಮತಿ ಪಡೆಯಬೇಕು. ಗಣೇಶ ಪ್ರತಿಷ್ಠಾಪನೆಯ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳಿರಬಾರದು. ವಿದ್ಯುತ್ ಲೈನ್‌ನ ಕೆಳಗೆ, ಅಕ್ಕಪಕ್ಕದಲ್ಲಿ ಪೆಂಡಾಲ್ ಅಥವಾ ಶಾಮಿಯಾನ ಹಾಕಬಾರದು. ಸುರಕ್ಷತೆಯ ಅಂತರ ಕಾಯ್ದುಕೊಳ್ಳಬೇಕು. ವಿದ್ಯುತ್ ಕಂಬಗಳು, ಪರಿವರ್ತಕಗಳಿಗೆ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು. ಗಣೇಶ ವಿಗ್ರಹ ವಿಸರ್ಜನೆ ದಿನವೂ ಶೋಭಾಯಾತ್ರೆ ವಾಹನಗಳಿಗೆ ವಿದ್ಯುತ್ ತಂತಿಗಳು ತಾಗುವ ರೀತಿಯಲ್ಲಿ ಅತೀ ಎತ್ತರದ ಧ್ವಜ ಅಥವಾ ಇತರ ಆಲಂಕಾರಿಕ ಸಾಧನಗಳನ್ನು ಕಟ್ಟಬಾರದು.
ವಿದ್ಯುತ್ ತಾತ್ಕಾಲಿಕ ಸ್ಥಗಿತಕ್ಕೆ ಮೆಸ್ಕಾಂ ಸಿದ್ಧ
ಗಣೇಶನ ವಿಗ್ರಹಗಳ ವಿಸರ್ಜನ ಮೆರವಣಿಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಮೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು. ಅಂತಹ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಗಣೇಶ ವಿಸರ್ಜನೆಗೆ ಅನುಕೂಲ ಮಾಡಿಕೊಡಲಾಗುವುದು. ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಮೆಸ್ಕಾಂ ತುರ್ತು ದೂರವಾಣಿ ಸಂಖ್ಯೆ 0824-2950953 ಅಥವಾ ಸಹಾಯವಾಣಿ 1912 ಸಂಪರ್ಕಿಸುವಂತೆ ಮೆಸ್ಕಾಂ ಪ್ರಕಟನೆಯಲ್ಲಿ ಕೋರಿದೆ.