ಕುಂದಾಪುರದ ಕೋಡಿ-ಗಂಗೊಳ್ಳಿ ಸಂಪರ್ಕಕ್ಕೆ ಬಾರ್ಜ್ ಬಳಕೆಗೆ ಪ್ರವಾಸೋದ್ಯಮ ಇಲಾಖೆ ಸೂಚನೆ

Views: 964
ಕನ್ನಡ ಕರಾವಳಿ ಸುದ್ದಿ: ಆರು ದಶಕಗಳಿಂದ ಕನಸಾದ ಸಿಗಂದೂರು ಸೇತುವೆ ನಿರ್ಮಾಣವಾಗಿ, ಇದೀಗ ಲೋಕಾರ್ಪಣೆಗೊಂಡಿದೆ. ಅಲ್ಲಿ ಎರಡು ಕಿ.ಮೀಟರ್ ನದಿ ದಾಟಲು ಇದ್ದ ಅಂಬಾರ ಕೊಡ್ಲು- ಕಳಸವಳ್ಳಿ ದಡಕ್ಕೆ ಇದೀಗ ಲಾಂಚ್ ವ್ಯವಸ್ಥೆ ಸ್ಥಗಿತಗೊಂಡಿದೆ.
ಗತ ವೈಭವಕ್ಕೆ ಸೇರಿದ ಸಿಗಂದೂರು ಲಾಂಚ್‌ನ್ನು ಗಂಗೊಳ್ಳಿ -ಕೋಡಿ ಮಧ್ಯೆ ಸಂಪರ್ಕದ ನದಿಗೆ ಬಳಸಿಕೊಂಡಾಗ ಕುಂದಾಪುರದ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುದಾಗಿ ‘ಕನ್ನಡ ಕರಾವಳಿ’ಯಲ್ಲಿ ಜುಲೈ 18ರಂದು ವರದಿಯಾಗಿತ್ತು.
ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಂದಾಪುರಕ್ಕೆ ಆಗಮಿಸಿದಾಗ ಇದರ ಬಗ್ಗೆ ಮನವಿ ಮಾಡಿಕೊಂಡಾಗ ಬಾರ್ಜ್ ಸೇವೆಗೆ ಆಶ್ವಾಸನೆ ನೀಡಿದ್ದರು.
ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಸರಕಾರಕ್ಕೆ ಮನವಿ ಮಾಡಿದ್ದು ಇದಾದ ಬಳಿಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಇದರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದ ಫಲವಾಗಿ ಸಿಗಂದೂರು ಬಾರ್ಜನ್ನು ಕುಂದಾಪುರ ಕೋಡಿಯಿಂದ ಗಂಗೊಳ್ಳಿ ಮಾರ್ಗದಲ್ಲಿ ಸಂಚಾರಕ್ಕೆ ಬಳಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಗಂಗೊಳ್ಳಿ -ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಗೆ ಅಡ್ಡಲಾಗಿ ನಡುವಿನ ಅಂತರ ಒಂದು ಕಿ.ಮೀಟರ್, ದೋಣಿಯಲ್ಲಿ ಸಾಗಿದರೆ 20 ನಿಮಿಷ ಕ್ರಮಿಸಬೇಕಾಗುತ್ತದೆ. ಗಂಗೊಳ್ಳಿ ಮತ್ತು ಕೋಡಿಯಿಂದ ಪ್ರತಿದಿನ ಸಾವಿರಾರು ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾರೆ.
ಮೂರು ದಶಗಳ ಹಿಂದೆ ಕುಂದಾಪುರ- ಗಂಗೊಳ್ಳಿ ನಡುವಿನ ಸೇತುವೆ ಪ್ರಸ್ತಾವವಾಗುತ್ತಿದ್ದು ಇದೀಗ ನೆನೆಗುದಿಗೆ ಬಿದ್ದಿದೆ. ಬಸ್ ಮೂಲಕ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಕ್ರಮಿಸಬೇಕಾದರೆ 16 ಕಿ.ಮೀ 45 ನಿಮಿಷ ಬೇಕಾಗುತ್ತದೆ. ಹೀಗೆ ಹೆಮ್ಮಾಡಿ ತಲ್ಲೂರಿನಿಂದ ಒಂದು ಸುತ್ತು ಹಾಕಿ ಕುಂದಾಪುರಕ್ಕೆ ಬರಬೇಕಾದರೆ ಒಂದು ಗಂಟೆಗಳಿಗಿಂತಲೂ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಪ್ರಸ್ತಾವಿತ ಸೇತುವೆ ನಿರ್ಮಾಣ ಆಗುವವರೆಗೆ ಸಿಗಂದೂರಿನ ಲಾಂಚ್ ಬಳಿಸಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ.
ಬಾರ್ಜ್ ನಿಂದ ಏನೇನು ಅನುಕೂಲ?
*ಯಾವುದೇ ಗಂಭೀರ ಅವಗಡ ಸಂಭವಿಸಿದಾಗ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಕ್ಷಣಮಾತ್ರದಲ್ಲಿ ಬರಬಹುದು.
* ಗಂಗೊಳ್ಳಿಯಿಂದ ತಾಜಾ ಮೀನು ಕುಂದಾಪುರಕ್ಕೆ ಅತೀ ಶೀಘ್ರದಲ್ಲಿ ಜನರಿಗೆ ತಲುಪಲು ಸಾಧ್ಯ
*ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಜನಕಾರಿ
*ಈಗಾಗಲೇ ಕುಂದಾಪುರದಲ್ಲಿ ರಿಂಗ್ ರೋಡ್ ಸಾಕಾರಗೊಂಡಿದೆ ಇದರಿಂದ ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಕ್ಕೆ ಬಹಳಷ್ಟು ಅನುಕೂಲವಾಗಲಿದೆ.
*ಉದ್ದಿಮೆದಾರರಿಗೆ ಸರಕು ಸಾಗಾಣಿಕೆಗೆ ಅನುಕೂಲ
*ಪಿಯುಸಿ ನಂತರ ಉನ್ನತ ವ್ಯಾಸಂಗಕ್ಕೆ ಕುಂದಾಪುರದ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ಅನುಕೂಲ
*ಈ ಮಾರ್ಗದಲ್ಲಿ ಲಾಂಚ್ ಬಳಸಿಕೊಂಡರೆ ಹತ್ತು- ಹದಿನೈದು ನಿಮಿಷದಲ್ಲಿಯೇ ಕುಂದಾಪುರ ಸಂಪರ್ಕಿಸಲು ಸಾಧ್ಯ.