ಸಾಣೂರು: ಉರುಳಿಗೆ ಬಿದ್ದ ಚಿರತೆಯ ರಕ್ಷಣೆ

Views: 0
ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮದ ಇಂದಿರಾನಗರದ ಹಾಲ್ಲೆಕಿ ಪರಿಸರದಲ್ಲಿ ಉರುಳಿಗೆ ಬಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.
ತಡರಾತ್ರಿ ರಾತ್ರಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ದೇವಣ್ಣ ರಾವ್ ಮತ್ತು ಸಾಣೂರು ಪಂಚಾಯಿತಿ ಸದಸ್ಯ ಪ್ರಕಾಶ್ ರಾವ್ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಚಿರತೆ ಘರ್ಜಿಸುವ ಶಬ್ದ ಕೇಳಿದೆ. ಪರಿಶೀಲಿಸಿದಾಗ ಚಿರತೆ ಉರುಳಿಗೆ ಬಿದ್ದಿರುವುದನ್ನು ಕಂಡುಬಂದಿದೆ.
ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾವ್ ಅವರಿಗೆ ವಿಷಯ ತಿಳಿಸಿದಾಗ, ಕೂಡಲೇ ಅವರು ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ವಿಭಾಗಕ್ಕೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆರ್.ಎಫ್.ಒ ವಲಯಾಧಿಕಾರಿ ಪ್ರಭಾಕರ್ ಕುಲಾಲ್, ಕೇಂದ್ರ ಘಟಕದ ಉಪ ವಲಯಾಧಿಕಾರಿ ಪ್ರಕಾಶ್ ಚಂದ್ರ, ರಾಘವೇಂದ್ರ ಶೆಟ್ಟಿ, ಜಯರಾಮ್, ಚಂದ್ರಕಾಂತ್ ಪೌಲ್, ವಿತೇಶ್ ಶೆಟ್ಟಿ, ಅರಣ್ಯ ವಿಕ್ಷಕ ಬಾಬು ಪೂಜಾರಿ ಕಾರ್ಯಾಚರಣೆ ನಡೆಸಿದರು.
ಮಂಗಳೂರಿನ ಪಶು ಅರಿವಳಿಕೆ ತಜ್ಞ ಡಾ. ಯಶಸ್ವಿ ನಾರವಿ, ಡಾ. ಮೇಘನಾ, ಡಾ. ಕೀರ್ತನ ಜೋಶಿ ಚಿರತೆಗೆ ಅರಿವಳಿಕೆ ಚುಚ್ಚು ಮದ್ದನ್ನು ನೀಡಿ ಚಿರತೆ ಸೆರೆ ಹಿಡಿದರು. ಪಂಚಾಯಿತಿ ಸದಸ್ಯ ಸತೀಶ್ ಪೂಜಾರಿ, ಸಂತೋಷ್ ರಾವ್ ಕಾಳಿಕಾಂಬಾ ಹಾಗೂ ಸ್ಥಳೀಯ ಸಾರ್ವಜನಿಕರು ಇದ್ದರು.
ತಾಲ್ಲೂಕಿನ ಸಾಣೂರು , ಮಿಯಾರು, ಕಾರ್ಕಳ ನಗರದ ಕಾಳಿಕಾಂಬಾ ಪ್ರದೇಶದಲ್ಲಿ ಚಿರತೆ ಹಾವಳಿ ತುಂಬಾ ಇದ್ದು, ಇದೀಗ ಚಿರತೆಯ ಸೆರೆಯಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.