ಸರ್ಕಾರಿ ಪದವಿ ಕಾಲೇಜಿನಲ್ಲಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಾತಿ: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಗೆ ಸೂಚನೆ
Views: 29
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ ಪಿಹೆಚ್ ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ ನೇಮಕಾತಿ ಪಡೆದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ ನೇಮಕಾತಿ ಪಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ತಕ್ಷಣ ಸೇವೆಯಿಂದ ಬಿಡುಗಡೆಗೊಳಿಸಿ, ಮುಂದಿನ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟು 249 ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳ ಪೈಕಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪತ್ತೆಯಾಗಿವೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ 33 ಪ್ರಕರಣಗಳು ವರದಿಯಾಗಿವೆ.
ಕಲಬುರಗಿ -33, ಯಾದಗಿರಿ -31, ಬೀದರ್ -28, ರಾಯಚೂರು- 24, ಕೊಪ್ಪಳ-13, ವಿಜಯನಗರ- 9, ಬಳ್ಳಾರಿ- 2, ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 19, ಕಲಬುರಗಿಯ ಸೇಡಂ ರಸ್ತೆಯ ಸ್ವಾಯತ್ತ ಸರ್ಕಾರಿ ಕಾಲೇಜಿನಲ್ಲಿ 17 ಹಾಗೂ ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ.






