ಇತರೆ

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಮಹಿಳೆಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೈಲು ಶಿಕ್ಷೆ

Views: 119

ಕನ್ನಡ ಕರಾವಳಿ ಸುದ್ದಿ:  27 ವರ್ಷದ ಮಹಿಳೆಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದ 62 ವರ್ಷದ ವ್ಯಕ್ತಿಗೆ ಶಿವಮೊಗ್ಗ ಜಿಲ್ಲೆಯ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಒಂದೂವರೆ ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.

ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ಮಹಿಳೆಗೆ ವ್ಯಕ್ತಿಯೋರ್ವ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೇ ಆಕೆಯ ಫೋಟೊಗಳನ್ನು ಇಟ್ಟುಕೊಂಡು, ಒಂದು ವೇಳೆ ದೂರು ನೀಡಿದರೆ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಚಂದ್ರಪ್ಪ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಎರಡನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಯ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

 

Related Articles

Back to top button
error: Content is protected !!