ಸಂಭ್ರಮ ಸಡಗರದ ಆನೆಗುಡ್ಡೆ ಬ್ರಹ್ಮರಥೋತ್ಸವ
Views: 93
ಕನ್ನಡ ಕರಾವಳಿ ಸುದ್ದಿ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಸೋಮವಾರ ಸಂಭ್ರಮ ಸಡಗರದಿಂದ ನಡೆಯಿತು.
ರಥೋತ್ಸವದ ಪ್ರಯುಕ್ತ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ, ಸುವರ್ಣ ಪಲ್ಲಕಿ ಉತ್ಸವ, ಮಹಾ ಅನ್ನಸಂತರ್ಪಣೆ, ಶಯನೋತ್ಸವ, ರಾತ್ರಿ ಸುಡುಮದ್ದು ಪ್ರದರ್ಶನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜಕರಿಂದ ಪ್ರಸಾದ ಮತ್ತು ಪಾನಕ ವಿತರಣೆ ನಡೆಯಿತು.
ಚಂಡೆವಾದನ, ಪಂಚ ವಾದ್ಯ, ಪಲ್ಲಕ್ಕಿ ಉತ್ಸವ, ಕೀಲು ಕುದುರೆ, ಗೊಂಬೆ ಕುಣಿತ, ತಟ್ಟಿರಾಯ ಕುಣಿತಗಳು ರಥೋತ್ಸವದ ಮೆರುಗನ್ನು ಹೆಚ್ಚಿಸಿದವು.
ಪಾನಕ ಸಮಿತಿಯಿಂದ ಪಾನಕ ವಿತರಣೆ ಹಾಗೂ ” ಆರ್ಚಕ ಮತ್ತು ಆಡಳಿತ ಮಂಡಳಿ ಸಹಯೋಗದಲ್ಲಿ ವಿಶೇಷ ಪಂಚಖಾದ್ಯಗಳನ್ನು ದೇವರಿಗೆ ಸಮರ್ಪಿಸಿ ವಿಶೇಷ ಅನ್ನಪ್ರಸಾದದೊಂದಿಗೆ ವಿತರಿಸಲಾಯಿತು.
ಸಾಂಸ್ಕೃತಿಕ ಕಾಠ್ಯಕ್ರಮದ ಅಂಗವಾಗಿ ಕಾರ್ಕಳ ವಿದ್ವಾನ್ ಯೋಗಿಶ್ ಕಿಣಿ ಬಳಗದವರಿಂದ ಭಕ್ತಿ ಸಂಧ್ಯಾ ಕಾರ್ಯಕ್ರಮ ಹಾಗೂ ಸಂಜೆ ಸಾಲಿಗ್ರಾಮ ತಂಡದವರಿಂದ ಸತೀಶ್ ದೇವಾಡಿಗ ಬಳಗದವರಿಂದ ಸ್ಯಾಕ್ರೋಫೋನ್ ವಾದನ ಹಾಗೂ ರಾತ್ರಿ ಬಪ್ಪನಾಡು ಮೇಳದಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಜರುಗಿತು.
ದೇವಳದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಶ್ರೀರಮಣ ಉಪಾಧ್ಯಾಯ, ಆನುವಂಶಿಕ ಪರ್ಯಾಯ ಅರ್ಚಕ ಕೆ.ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ವಿಶ್ರಾಂತ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ, ದೇವಳದ ಆನುವಂಶಿಕ ಮೊಕ್ತೇಸರ. ಕೆ.ಪದ್ಮನಾಭ ಉಪಾಧ್ಯಾಯ, ಕೆ.ನಿರಂಜನ್ ಉಪಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್ ಉಪಸ್ಥಿತರಿದ್ದರು.








