ಶಾಂತಿಯುತವಾಗಿ ಮುಗಿದ ಬ್ರಾಹ್ಮಣ ಮಹಾಸಭಾ ಚುನಾವಣೆ

Views: 117
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಪ್ರತಿಷ್ಠಿತ ಸಂಘಟನೆಗಳಲ್ಲೊಂದಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್)ನ ನೂತನ ಅಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಆಯ್ಕೆಗೆ ಏಪ್ರಿಲ್ 13ರ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4 ರವರೆಗೆ ಇಲ್ಲಿ ಮತದಾನ ನಡೆಯಿತು.
ಈಗಾಗಲೇ 11 ಜಿಲ್ಲೆಗಳಲ್ಲಿ ಅಶೋಕ್ ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ್ ಶರ್ಮ ತಂಡದ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ ಕ್ಷೇತ್ರಗಳಲ್ಲಿ ಭಾನುವಾರ ಚುನಾವಣೆ ನಡೆಯಿತು.
ರಾಜ್ಯಾದ್ಯಂತ ಸುಮಾರು 64 ಸಾವಿರಕ್ಕೂ ಅಧಿಕ ಮತದಾರರಿದ್ದು, ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಉಡುಪಿ ಜಿಲ್ಲೆಯಲ್ಲಿ 1220 ಮತದಾರರಿದ್ದು, ಇದೇ ಮೊದಲ ಬಾರಿಗೆ ಕುಂದಾಪುರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಈ ಮೊದಲು ಮಹಾಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಮತದಾರರು ಶಿವಮೊಗ್ಗ ಮತಗಟ್ಟೆಗೆ ಹೋಗಬೇಕಾಗಿತ್ತು. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಂತೆ ಈ ಮಹಾಸಭೆ ಚುನಾವಣೆಯಲ್ಲಿ ಏನೂ ಆಕರ್ಷಕ ಅಂಶಗಳಿಲ್ಲದ್ದರಿಂದ ಇಲ್ಲಿನವರು 140 ಕಿ ಮೀ ದೂರದ ಶಿವಮೊಗ್ಗಕ್ಕೆ ಹೋಗಿ ಮತ ಹಾಕಲು ಒಲವು ತೋರುತ್ತಿರಲಿಲ್ಲ.
ಮಹಾಸಭಾದ ಈ ಹಿಂದಿನ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಒಮ್ಮೆ ಉಡುಪಿ ಜಿಲ್ಲಾ ಪ್ರವಾಸಕ್ಕೆ ಬಂದಿದ್ದಾಗ, ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಾಲಯ ಸಭಾಂಗಣದಲ್ಲಿ ನಡೆದಿದ್ದ ಸಭೆಯಲ್ಲಿ, ಕುಂದಾಪುರಕ್ಕೆ ಮತಗಟ್ಟೆ ನೀಡಬೇಕು ಎಂಬ ಬೇಡಿಕೆ ಇರಿಸಲಾಗಿತ್ತು. ಮಹಾಸಭಾ ಪದಾಧಿಕಾರಿಯಾಗಿದ್ದ ಕೃಷ್ಣಾನಂದ ಚಾತ್ರ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾಗಿದ್ದ ಅನಂತ ಪದ್ಮನಾಭ ಬಾಯಿರಿ ಬೆಳ್ವೆ, ಗಣೇಶ್ ರಾವ್ ಕುಂಭಾಶಿ, ವಾದಿರಾಜ ಹೆಬ್ಬಾರ್ ರವರ ನೇತೃತ್ವದ ನಿಯೋಗವೊಂದು ಹಾರನಹಳ್ಳಿಯವರಿಗೆ ಈ ಬಗ್ಗೆ ಮನವಿ ನೀಡಿತ್ತು. ಉಡುಪಿ ಜಿಲ್ಲೆಯಲ್ಲಿ ಮಹಾಸಭಾದ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಿದರೆ, ಇಲ್ಲಿಗೆ ಮತಗಟ್ಟೆ ಕೊಡುವ ಬಗ್ಗೆ ಪರಿಶೀಲಿಸಬಹುದು ಎಂದು ಅಧ್ಯಕ್ಷರು ಭರವಸೆ ನೀಡಿದ್ದರು. ಅದರಂತೆ, ಜಿಲ್ಲೆಯ ಎಲ್ಲಾ ಬ್ರಾಹ್ಮಣ ವಲಯದವರೂ ಸಂಘಟಿತ ಯತ್ನಗಳನ್ನು ಮಾಡಿ ಹೆಚ್ಚು ಮಂದಿ ಮಹಾಸಭಾದ ಸದಸ್ಯರಾಗುವಂತೆ ಮಾಡಿದ್ದರು. ಕುಂದಾಪುರ ತಾಲೂಕಿನಿಂದ ಅತಿ ಹೆಚ್ಚು ನೋಂದಾವಣೆಗಳಾಗಿದ್ದು, ಉಡುಪಿ ಜಿಲ್ಲೆಯ ಏಕೈಕ ಮತಗಟ್ಟೆ ಕುಂದಾಪುರಕ್ಕೆ ಬಂದಿತು.
ಮಹಾಸಭಾದ ನಿಯಮಾವಳಿಗಳ ಪ್ರಕಾರ ಚುನಾವಣಾ ದಿನಾಂಕಕ್ಕೆ ಒಂದು ವರ್ಷ ಮೊದಲು ಸದಸ್ಯರಾಗಿರುವವರು ಮಾತ್ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಬಹುದು.
ಅಂತೆಯೇ ಭಾನುವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಮತದಾರರು ಕುಂದಾಪುರದ ವಿ ಕೆ ಆರ್ ಆಚಾರ್ಯ ಸ್ಮಾರಕ ಶಾಲೆಯಲ್ಲಿನ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ಡಾ. ವಿ. ಭಾನುಪ್ರಕಾಶ್ ಶರ್ಮ ಮತ್ತು ರಘುನಾಥ್ ನಡುವೆ ಚುನಾವಣೆ ನಡೆದಿತ್ತು. ಜಿಲ್ಲೆಯ ಒಟ್ಟು 1220 ಮಂದಿ ಮತದಾರರಲ್ಲಿ 439 ಮಂದಿ ಮತ ಚಲಾಯಿಸಿದ್ದರು. ಸಂಜೆ 4 ಗಂಟೆಗೆ ಮತದಾನದ ಅವಧಿ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಮತಗಳ ಎಣಿಕೆ ನಡೆಸಲಾಯಿತು. ಡಾ. ಭಾನುಪ್ರಕಾಶ್ ಶರ್ಮಾರಿಗೆ 355 ಹಾಗೂ ರಘುನಾಥರಿಗೆ 78 ಮತಗಳು ಲಭಿಸಿದ್ದವು. 6 ಮತಗಳು ಅಸಿಂಧುವಾಗಿದ್ದವು ಎಂದು ತಿಳಿದುಬಂದಿದೆ. ಕೋಟೇಶ್ವರ ವಲಯದ ಅಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ಮತ್ತು ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ರವರ ಅವಿರತ ಶ್ರಮದಿಂದಾಗಿ ಕೋಟೇಶ್ವರ ವಲಯದಿಂದ ಅತಿಹೆಚ್ಚು ಮತಗಳ ಚಲಾವಣೆಯಾಗಿತ್ತು.