ರೀಲ್ಸ್ ಮಾಡುವ ಹುಚ್ಚು ಸಾಹಸ! ಬೆಟ್ಟದ ತುದಿಯಲ್ಲಿ ಕಾರು ರಿವರ್ಸ್ ವೇಳೆ ಪ್ರಪಾತಕ್ಕೆ ಬಿದ್ದು ಯುವತಿ ಸಾವು

Views: 254
ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ರೀಲ್ಸ್ ಮಾಡುವ ವೇಳೆ ಕಾರೊಂದು ಕಣಿವೆಗೆ ಬಿದ್ದು ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಯುವತಿ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯದೆ ಕಾರಿನ ಕೀ ಕೊಟ್ಟು, ನಿರ್ಲಕ್ಷ ವಹಿಸಿ ಸಾವಿಗೆ ಕಾರಣವಾದ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
23 ವರ್ಷದ ಶ್ವೇತಾ ಸುರ್ವಾಸೆ ಅವರು ಸೋಮವಾರ ಮಧ್ಯಾಹ್ನ ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಆಕಸ್ಮಿಕವಾಗಿ ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ಪ್ರಪಾತಕ್ಕೆ ಉರುಳಿ ಬಿದ್ದು ಸಾವನ್ನಪ್ಪಿದ್ದಾರೆ. ಆಕೆಯ ಸ್ನೇಹಿತ ಸೂರಜ್ ಮುಲೆ ಅವರು ಆಕೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಿರ್ಲಕ್ಷ್ಯದಿಂದ ಯುವತಿ ಸಾವಿಗೆ ಕಾರಣವಾದ ಆರೋಪದ ಮೇಲೆ ಸೂರಜ್ ಮುಲೆ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ ಎಂದು ಖುಲ್ತಾಬಾದ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ನೇಹಿತ ಮುಲೆ ಜತೆಗೆ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಶ್ವೇತಾ ತೆರಳಿದ್ದರು. ಈ ವೇಳೆ ಬೆಟ್ಟದ ಮೇಲೆ ಕಾರು ನಿಲ್ಲಿಸಿ ರೀಲ್ಸ್ ಮಾಡಲು ಮುಂದಾಗಿದ್ದರು. ಕಾರು ಚಾಲನೆ ಗೊತ್ತಿರದಿದ್ದರೂ ಶ್ವೇತಾ ಕಾರಿನ ಚಾಲಕನ ಸೀಟಿನಲ್ಲಿ ಕೂತು ಡ್ರೈವ್ ಮಾಡುವ ಸಾಹಸ ನಡೆಸಿದ್ದಾರೆ. ಈ ವೇಳೆ ಸ್ನೇಹಿತ ಸೂರಜ್ ಮುಳೆ(25) ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು.
ಟೊಯೊಟಾ ಇಟಿಯೋಸ್ ಕಾರನ್ನು ನಿಧಾನವಾಗಿ ರಿವರ್ಸ್ ಗೇರ್‌ನಲ್ಲಿ ಶ್ವೇತಾ ಚಲಾಯಿಸುತ್ತಿದ್ದರು. ಬ್ರೇಕ್ ಅಥವಾ ಎಕ್ಸಲೇಟರ್ ಬಗ್ಗೆ ತಿಳುವಳಿಕೆ ಇಲ್ಲದೆ ಏಕಾಏಕಿ ಎಕ್ಸಲೇಟರ್ ಒತ್ತಿದ್ದಾರೆ. ನೋಡ ನೋಡುತ್ತಿದ್ದಂತೆ, ಸ್ನೇಹಿತರ ಕಣ್ಣ ಮುಂದೆಯೇ ಕಾರು ಸಮೇತ ಆಕೆ ಸುಮಾರು 300 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ. ಹಿಮ್ಮುಖವಾಗಿ ಚಲಿಸುತ್ತಿದ್ದ ಕಾರು, ಅವಘಡಗಳನ್ನು ತಡೆಯಲು ನಿರ್ಮಿಸಲಾಗಿದ್ದ ಗೋಡೆ ಭೇದಿಸಿಕೊಂಡು 300 ಅಡಿ ಆಳಕ್ಕೆ ಉರುಳಿದೆ.