ಯಕ್ಷಗಾನ: ಸಾಂಸ್ಕೃತಿಕ ಪಲ್ಲಟ ಮತ್ತು ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ಕಲೆ—ನಾನಕ್ ಶೆಟ್ಟಿ ಕಿನ್ನಿಗೋಳಿ
ಯಕ್ಷಗಾನ ಕೇವಲ ಮನರಂಜನೆಗಾಗಿ ಹುಟ್ಟಿದ ಕಲೆಯಲ್ಲ, ಅದು ಭಕ್ತಿ, ನೀತಿ ಮತ್ತು ಧರ್ಮಬೋಧನೆಯ ಜೀವಂತ ವೇದಿಕೆ
Views: 202
ಕನ್ನಡ ಕರಾವಳಿ ಸುದ್ದಿ: ಯಕ್ಷಗಾನವು ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರಕಲೆ ಎಂಬ ನಾಲ್ಕು ಪ್ರಧಾನ ಕಲಾಮಾಧ್ಯಮಗಳ ಸಮನ್ವಯದಿಂದ ರೂಪುಗೊಂಡಿರುವ ಒಂದು ಅಪರೂಪದ ಸಮ್ಮಿಶ್ರ ಕಲೆ. ಇದರಲ್ಲಿ ಪ್ರತಿಯೊಂದು ಅಂಶವೂ ಪರಸ್ಪರ ಅವಲಂಬಿತವಾಗಿದ್ದು, ಒಂದು ಅಂಶ ಕುಂದಿದರೂ ಸಂಪೂರ್ಣ ಕಲೆಯ ಸೌಂದರ್ಯ, ಮೂಲತತ್ವ ಮತ್ತು ಗುಣಮಟ್ಟಕ್ಕೆ ಧಕ್ಕೆ ಉಂಟಾಗುತ್ತದೆ. ಯಕ್ಷಗಾನ ಕೇವಲ ಮನರಂಜನೆಗಾಗಿ ಹುಟ್ಟಿದ ಕಲೆಯಲ್ಲ; ಅದು ಭಕ್ತಿ, ನೀತಿ ಮತ್ತು ಧರ್ಮಬೋಧನೆಯ ಜೀವಂತ ವೇದಿಕೆಯಾಗಿದೆ.

ಓರ್ವ ಅನಿವಾಸಿ ಭಾರತೀಯನಾಗಿ, ಹವ್ಯಾಸಿ ಮೇಳಗಳ ಯಕ್ಷಗಾನದ ತುಣುಕುಗಳನ್ನು ಆಗಾಗ ಯೂಟ್ಯೂಬ್‌ನಲ್ಲಿ ನೋಡುತ್ತಿದ್ದರೂ, ಇತ್ತೀಚಿಗೆ ಊರಿಗೆ ಹೋದಾಗ ಹಲವು ಹರಕೆಯ ಯಕ್ಷಗಾನ ಪ್ರಸಂಗಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಒಟ್ಟಾರೆಯಾಗಿ, ನನಗೆ ಬಾಲ್ಯದಲ್ಲಿ ನೋಡಿದ್ದ ಯಕ್ಷಗಾನಕ್ಕೂ, ಈಗಿನ ಯಕ್ಷಗಾನಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬಂದು ನಿರಾಸೆಯಾಯಿತು.

ಒಂದು ಕಾಲದಲ್ಲಿ ರಾತ್ರಿಯಿಡೀ ಜರುಗುವ ಜಗತ್ತಿನ ಏಕೈಕ ಕಲೆಯೆಂದು ಹೆಗ್ಗಳಿಕೆ ಗಳಿಸಿದ್ದ ಕರಾವಳಿಯ ಈ ಪುರಾತನ ಕಲೆ, ಇತ್ತೀಚಿನ ಪರ್ವದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಸಂದೇಹ ಸವಾಲಾಗುತ್ತಿದೆ. ಹಿಂದೆ ಅತಿರಥ-ಮಹಾರಥಿ ಪಾತ್ರಧಾರಿಗಳು ತಮ್ಮ ಅಪೂರ್ವ ಅಭಿನಯ,ತರ್ಕಬದ್ಧ ವಾಗ್ವದ ಹಾಗೂ ಚೆಂಡೆಯ ಅಬ್ಬರದೊಂದಿಗೆ ಪ್ರೇಕ್ಷಕರನ್ನು ಯಕ್ಷಲೋಕದ ಮಾಯಾಲೋಕದಲ್ಲಿ ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಆದರೆ ಇತ್ತೀಚಿನ ಪ್ರದರ್ಶನಗಳಲ್ಲಿ ಕಲೆಗಿಂತ ವ್ಯಾವಹಾರಿಕತೆ ಮೇಲುಗೈ ಸಾಧಿಸುತ್ತಿದೆ. ರಂಗಸ್ಥಳದ ಮೇಲೆ ಕಲಾವಿದ ತೋರಬೇಕಾದ ಗಾಂಭೀರ್ಯದ ಬದಲು ನೀರಸತನ ಮತ್ತು ಆತುರ ಎದ್ದು ಕಾಣುತ್ತಿದೆ.
ಕರಾವಳಿಯ ಈ ಜೀವಂತ ಕಲೆಗೆ ಹೊಸ ಮೇಳಗಳು ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹವಾದರೂ, ಮುಖ್ಯವಾಗಿ ಯುವ ಕಲಾವಿದರಲ್ಲಿ ಅಭಿನಯ, ನೃತ್ಯ ಮತ್ತು ಸಂಭಾಷಣೆಗಳ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಹಾಡುಗಾರಿಕೆಯಲ್ಲಿ ಹಾಗೂ ವೇಷಭೂಷಣಗಳಲ್ಲಿ ಸಕಾರಾತ್ಮಕ ವಿಭಿನ್ನತೆ ಬದಲಾವಣೆಗಳಾಗುತ್ತಿದ್ದರೂ, ಮಾತುಗಾರಿಕೆ, ಸಂಭಾಷಣೆಯ ಶುದ್ಧತೆ ಮತ್ತು ಮುಖವರ್ಣಿಕೆಯಲ್ಲಿ ಕಳಪೆತನ ಕಾಣಿಸುತ್ತಿದೆ. ಇತ್ತೀಚಿಗೆ ಸಮಾಜದಲ್ಲಿ ಧಾರ್ಮಿಕ ಅರಿವು ಮೂಡಿಸುವುದಕ್ಕಿಂತ, ತೋರಿಕೆಯ ಆಡಂಬರದ ಆಚರಣೆಗಳ ವಾಡಿಕೆ ಹೆಚ್ಚಾಗುತ್ತಿದೆ. ಸ್ಥಳೀಯ ನಂಬಿಕೆಯಾದ ಭೂತಾರಾಧನೆಗೆ ಪ್ರಚಾರದ ಅಗತ್ಯವಿಲ್ಲದಿದ್ದರೂ, ಸಿನಿಮೀಯ ಪ್ರಭಾವದ ವ್ಯಾವಹಾರಿಕ ದೃಷ್ಟಿಯಿಂದ ದುರುಪಯೋಗಕ್ಕೊಳಗಾಗುವಂತೆ ಯಕ್ಷಗಾನಕ್ಕೂ ಇಂತಹ ಪರಿಸ್ಥಿತಿ ಒದಗಬಾರದು.

ಅಪಮೌಲ್ಯಗೊಳ್ಳುತ್ತಿರುವ ಪೌರಾಣಿಕ ಹಿನ್ನೆಲೆ: ಇಂದಿನ ಪ್ರದರ್ಶನಗಳಲ್ಲಿ ದೇವತೆಗಳನ್ನು ಅಥವಾ ಧಾರ್ಮಿಕ ಮೌಲ್ಯಗಳನ್ನು ಚಿತ್ರಿಸುವ ರೀತಿ ಆತಂಕಕಾರಿಯಾಗಿದೆ. ವಿಶೇಷವಾಗಿ ರಾಕ್ಷಸ ಪಾತ್ರಗಳ ಮೂಲಕ ದೇವತೆಗಳನ್ನು, ಬ್ರಾಹ್ಮಣರನ್ನು ಹಾಗೂ ಸನಾತನ ಧರ್ಮವನ್ನೇ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಸಂಭಾಷಣೆಗಳಲ್ಲಿ ಇತರ ಪಾತ್ರಧಾರಿಗಳ ಸಂಭಾವನೆ, ವೃತ್ತಿ ಅಥವಾ ಸಮುದಾಯಗಳ ನಿಂದನೆಯನ್ನು ಕೇವಲ ಅಗ್ಗದ ಶಿಳ್ಳೆಗಾಗಿ ತುರುಕಲಾಗುತ್ತಿದೆ. ಪೌರಾಣಿಕವಾಗಿ ರಾಕ್ಷಸರು ಧರ್ಮವಿರೋಧಿಗಳಾದರೂ, ಅವರು ಶಿವಭಕ್ತರಾಗಿರುತ್ತಿದ್ದರು ಮತ್ತು ಅವರ ತರ್ಕವು ತಾತ್ವಿಕವಾಗಿರುತ್ತಿತ್ತು. ಆದರೆ ಈಗ ತಾತ್ವಿಕತೆ ಕಣ್ಮರೆಯಾಗಿ, ಕೇವಲ ಅಗ್ಗದ ಹಾಸ್ಯ ಹಾಗೂ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಸಂಭಾಷಣೆಗಳು ಇಳಿದಿವೆ. ಸತ್ಯಯುಗದ ಕಥೆಗಳಲ್ಲಿ ತ್ರೇತಾಯುಗದ ಘಟನೆಗಳನ್ನು ಬೆರೆಸುವುದು, ಪುರಾಣಗಳ ಮೂಲ ಜ್ಞಾನವಿಲ್ಲದೆ ಮಾತನಾಡುವುದು ಕಲಾವಿದರ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸುತ್ತದೆ.

ನಿರ್ಬಂಧ ಮತ್ತು ಗುಣಮಟ್ಟದ ಕುಸಿತ: ಧ್ವನಿವರ್ಧಕ ಬಳಕೆಯ ಮೇಲಿನ ನಿರ್ಬಂಧಗಳಿಂದಾಗಿ ಯಕ್ಷಗಾನದ ಅವಧಿಯನ್ನು ಕಡಿತಗೊಳಿಸಲಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಬಯಲಾಟಗಳು ಈಗ ಕಾಲಮಿತಿಯ ಪ್ರದರ್ಶನಗಳಾಗಿವೆ. ಅನ್ಯರ ಧ್ವನಿವರ್ಧಕದ ಅಬ್ಬರವನ್ನು ತಡೆಯಲು ಹೋಗಿ, ನಮ್ಮ ಸಂಸ್ಕೃತಿಯ ಭಾಗವಾದ ಯಕ್ಷಗಾನವನ್ನೇ ಅರ್ಧಗೊಳಿಸಿರುವುದು ಬೇಸರದ ವಿಷಯ. ಆದರೂ, ಕಳಪೆ ಗುಣಮಟ್ಟದ ಸಂಭಾಷಣೆ ಮತ್ತು ಅಸಂಬದ್ಧ ಹಾಸ್ಯವನ್ನು ರಾತ್ರಿಯಿಡೀ ಸಹಿಸಿಕೊಳ್ಳುವುದಕ್ಕಿಂತ ಸಂಕ್ಷಿಪ್ತ ಪ್ರದರ್ಶನವೇ ಲೇಸು ಎಂಬ ಮನಸ್ಥಿತಿಗೆ ಪ್ರೇಕ್ಷಕರು ಬರುತ್ತಿದ್ದಾರೆ. ಸಂಪೂರ್ಣ ಯಕ್ಷಗಾನವನ್ನು ನೋಡಿ ಧನ್ಯತಾ ಭಾವದಿಂದ ಮರಳುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಲೆ, ಧರ್ಮ ಹಾಗೂ ನಂಬಿಕೆಯ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಕಲಾವಿದರ ಕಡೆಗಣನೆ ಮತ್ತು ಸರ್ಕಾರದ ನಿರ್ಲಕ್ಷ್ಯ: ಸಮಾಜದ ಸ್ವಾಸ್ಥ್ಯ ಕೆಡಿಸುವ ಧಾರಾವಾಹಿ ಅಥವಾ ಚಲನಚಿತ್ರ ಕಲಾವಿದರಿಗೆ ಸಿಗುವ ಸಂಭಾವನೆ ಮತ್ತು ಗೌರವ, ಅಪಾರ ವಾಕ್ಚತುರ್ಯ ಹೊಂದಿರುವ ಯಕ್ಷಗಾನ ಕಲಾವಿದರಿಗೆ ಸಿಗುತ್ತಿಲ್ಲ. ಬಹುತೇಕ ಮೇಳಗಳು ದೇವಸ್ಥಾನಗಳಿಗೆ ಸೇರಿವೆ. ಭಕ್ತರು ನೀಡುವ ಕಾಣಿಕೆ ಸರ್ಕಾರಕ್ಕೆ ಸೇರುತ್ತಿದೆಯೇ ಹೊರತು, ಅದು ಭಕ್ತರ ಸವಲತ್ತಿಗಾಗಲಿ ಅಥವಾ ಕಲಾವಿದರ ಶ್ರೇಯೋಭಿವೃದ್ಧಿಗಾಗಲಿ ಬಳಕೆಯಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಿಗುವಂತೆ ಕಲಾವಿದರಿಗೂ ಗೌರವಯುತ ಸಂಭಾವನೆ, ಪಿಂಚಣಿ, ಜೀವವಿಮೆ ಮತ್ತು ಆರೋಗ್ಯ ಸವಲತ್ತುಗಳು ಸಿಗುವಂತಾಗಬೇಕು. ಇದರಿಂದ ಹೊಸ ತಲೆಮಾರಿನ ಪ್ರತಿಭಾವಂತರು ಯಕ್ಷಗಾನದತ್ತ ಒಲವು ತೋರಿ, ಶಿಸ್ತುಬದ್ಧವಾಗಿ ಸಾಂಪ್ರದಾಯಿಕತೆಯನ್ನು ಕಲಿತು ಕಲೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.

ಯಕ್ಷಗಾನ ಉಳಿಯಬೇಕೆಂದರೆ ಅದು ಕೇವಲ ವೇದಿಕೆಯ ಮೇಲಲ್ಲ, ಮೌಲ್ಯಗಳಲ್ಲಿ ಉಳಿಯಬೇಕು. ಧರ್ಮವನ್ನು ಪ್ರಶ್ನಿಸುವುದು ತಪ್ಪಲ್ಲ, ಆದರೆ ಯಾರನ್ನೂ ಅವಮಾನಿಸುವುದು ಕ್ಷಮಾರ್ಹವಲ್ಲ. ಮತ್ತು ಅದನ್ನು ಕೇವಲ ವ್ಯಾಪಾರಕ್ಕಾಗಿ ಬಳಸುವುದು ಯಕ್ಷಗಾನದ ಹಾಗೂ ಧರ್ಮದ ಅವನತಿಗೆ ನಾಂದಿಯಾಗುತ್ತದೆ. ಸನಾತನ ಧರ್ಮದ ನೀತಿಗಳನ್ನು ಜನರಿಗೆ ತಲುಪಿಸುವ ಈ ಕಲೆ ‘ಅಗ್ಗದ ಮನರಂಜನೆ’ಯಾಗದಂತೆ ತಡೆಯಬೇಕಾದ ಜವಾಬ್ದಾರಿ ಸಂಘಟಕರು, ಕಲಾವಿದರು ಮತ್ತು ಭಕ್ತರ—ಎಲ್ಲರ ಮೇಲೂ ಇದೆ. ಇದು ಕೇವಲ ಕಲೆಯ ಪ್ರಶ್ನೆಯಲ್ಲ, ನಮ್ಮ ಸಂಸ್ಕೃತಿಯ ಧರ್ಮದ ಅಸ್ತಿತ್ವದ ಪ್ರಶ್ನೆ.
ಬರಹ: ನಾನಕ್ ಶೆಟ್ಟಿ ಕಿನ್ನಿಗೋಳಿ. ಮಸ್ಕತ್ ಒಮಾನ್ ರಾಷ್ಟ್ರ






