ಮುಖ್ಯಮಂತ್ರಿ ಬದಲಾವಣೆ ಪದೆ ಪದೇ ಚರ್ಚೆ ಅನಗತ್ಯ..5 ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಖಚಿತ!

Views: 39
ಕನ್ನಡ ಕರಾವಳಿ ಸುದ್ದಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ನಡೆಯುತ್ತಲೇ ಇವೆ, ಅದರಿಂದ ಯಾವುದೇ ಬದಲಾವಣೆಯಾಗಿಲ್ಲ, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಎಂದು ಪದೆ ಪದೇ ಪ್ರಸ್ತಾಪಿಸಲಾಗುತ್ತಿದೆ.ಈ ಚರ್ಚೆಗಳೇ ಅನಗತ್ಯ ಮತ್ತು ಅಪ್ರಸ್ತುತ ಎಂದರು.
ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಸಿದ್ದರಾಮಯ್ಯ ಅವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಿದಾಕ್ಷಣ ಅದು ಬಡ್ತಿಯಲ್ಲ. ಸಮಿತಿ ಅಧ್ಯಕ್ಷನನ್ನಾಗಿ ಮಾಡಲಾಯಿತು ಎಂದು ತಪ್ಪು ಮಾಹಿತಿ ಹರಡಲಾಯಿತು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಧ್ವನಿ. ಆ ಕಾರಣಕ್ಕೆ ಸಲಹಾ ಸಮಿತಿಗೆ ನೇಮಿಸಲಾಗಿದೆ. ಇದನ್ನು ಬಡ್ತಿ ಎಂದಾಗಲೀ, ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಎಂದಾಗಲೀ ಭಾವಿಸಬೇಕಿಲ್ಲ ಎಂದು ಹೇಳಿದರು.
ದೇಶದಲ್ಲಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಸಮಿತಿಯಲ್ಲಿರಬೇಕು ಎಂಬ ಕಾರಣಕ್ಕೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ಅದನ್ನು ವಿಪರೀತವಾಗಿ ಅಂದಾಜಿಸುವ ಅಗತ್ಯವಿಲ್ಲ. ಚರ್ಚೆ ನಡೆಸುವವರಿಗೂ ಸಾಮಾನ್ಯ ಜ್ಞಾನವಾದರೂ ಇರಬೇಕು. ಓಬಿಸಿ ಸಮಿತಿಯ ಸಲಹೆಗಾರರಾಗಿಯಷ್ಟೇ ನೇಮಕವಾಗಿದೆ. ಅದನ್ನು ಮುಖ್ಯಮಂತ್ರಿ ಬದಲಾವಣೆಗೆ ಮುನ್ಸೂಚನೆ ಎನ್ನುವ ಅಗತ್ಯ ಇಲ್ಲ. ನವೆಂಬರ್ಗೆ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗಲಿದೆ. ಮುಖ್ಯಮಂತ್ರಿ ಆಕಾಂಕ್ಷಿಯಾದವರು ತಮಗೆ ಅವಕಾಶ ಕೊಡಿ ಎಂದು ಹೇಳುತ್ತಾರೆ. ಅದರಲ್ಲೇನೂ ವಿಶೇಷ ಇಲ್ಲ. ಎರಡೂವರೆ ವರ್ಷಗಳ ಒಪ್ಪಂದವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.






