ಸಾಂಸ್ಕೃತಿಕ

ಮದುವೆ ನಿರಾಕರಿಸಿದ್ದಕ್ಕೆ ಚಿತ್ರರಂಗದ ಖ್ಯಾತ ಗಾಯಕಿ ಹತ್ಯೆ 

Views: 50

ಕನ್ನಡ ಕರಾವಳಿ ಸುದ್ದಿ: ಪಂಜಾಬಿ ಚಿತ್ರರಂಗದ ಉದಯೋನ್ಮುಖ ಗಾಯಕಿ ಯಶಿಂದರ್ ಕೌರ್ (29) ಅವರು ಶವವಾಗಿ ಪತ್ತೆಯಾಗಿದ್ದು, ಇಡೀ ಚಿತ್ರರಂಗ ಆಘಾತಕ್ಕೊಳಗಾಗಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಇವರ ಮೃತದೇಹ ಪಂಜಾಬ್‌ನ ನೀಲೋ ಕಾಲುವೆಯಲ್ಲಿ ಮಂಗಳವಾರ ಪತ್ತೆಯಾಗಿದೆ.

‘ಇಂದ‌ರ್ ಕೌ‌ರ್’ ಎಂದೇ ಅಭಿಮಾನಿಗಳ ವಲಯದಲ್ಲಿ ಗುರುತಿಸಿಕೊಂಡಿದ್ದ ಯಶಿಂದರ್ ಕೌರ್, ಮೇ 13 ರಂದು ದಿನಸಿ ಸಾಮಗ್ರಿ ತರಲು ತಮ್ಮ ಕಾರಿನಲ್ಲಿ ಮನೆಯಿಂದ ಹೊರಬಂದಿದ್ದರು. ಆದರೆ ತಡರಾತ್ರಿಯಾದರೂ ಅವರು ಮನೆಗೆ ಮರಳದಿದ್ದಾಗ ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ಕಾಲುವೆಯಲ್ಲಿ ಪತ್ತೆಯಾದ ಮೃತದೇಹವನ್ನು ಅವರ ಕುಟುಂಬಸ್ಥರು ಗುರುತಿಸಿದ್ದಾರೆ.

ಮದುವೆ ನಿರಾಕರಿಸಿದ್ದಕ್ಕೆ ಕೊಲೆ?

ಪೊಲೀಸ್‌ ತನಿಖೆಯ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮೊಗಾ ಜಿಲ್ಲೆಯ ಸುಖವಿಂದ‌ರ್ ಸಿಂಗ್ ಎಂಬಾತನಿಗೆ ಇಂದರ್ ಕೌರ್ ಪರಿಚಯವಿತ್ತು. ಆತ ಗಾಯಕಿಯನ್ನು ಮದುವೆಯಾಗಲು ಬಯಸಿದ್ದರೂ, ಇಂದರ್‌ ಕೌರ್ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಹಗೆತನದಿಂದ ಸುಖವಿಂದರ್ ಮತ್ತು ಆತನ ಸಹಚರರು ಸೇರಿ ಗಾಯಕಿಯನ್ನು ಗನ್‌ ಪಾಯಿಂಟ್‌ನಲ್ಲಿ ಅಪಹರಿಸಿ, ಹತ್ಯೆ ಮಾಡಿ ಕಾಲುವೆಗೆ ಎಸೆದಿದ್ದಾರೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಮುಖ್ಯ ಆರೋಪಿ ಸುಖವಿಂದರ್‌ ಸಿಂಗ್ ಇತ್ತೀಚೆಗಷ್ಟೇ ಕೆನಡಾದಿಂದ ಮರಳಿದ್ದ ಎನ್ನಲಾಗಿದ್ದು. ಈ ಕೃತ್ಯ ಎಸಗಿದ ಕೂಡಲೇ ಮತ್ತೆ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ. ಸುಖವಿಂದರ್ ಮತ್ತು ಆತನ ಸಹಚರ ಕರಮ್‌ಜೀತ್ ಸಿಂಗ್ ವಿರುದ್ಧ ಈಗಾಗಲೇ ಎಫ್‌ಐಆ‌ರ್ ದಾಖಲಾಗಿದೆ.

ಸದ್ಯ ಗಾಯಕಿಯ ಮೃತದೇಹವನ್ನು ಸಮ್ರಾಲಾದ ಸಿವಿಲ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

 

Related Articles

Back to top button
error: Content is protected !!