ಆರೋಗ್ಯ

ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಅಪಘಾತದಲ್ಲಿ ವಧು ಆಸ್ಪತ್ರೆಗೆ ದಾಖಲು: ವರ ತೆಗೆದುಕೊಂಡ ನಿರ್ಧಾರಕ್ಕೆ ಆಸ್ಪತ್ರೆಯಲ್ಲಿಯೇ ಮದುವೆ

Views: 162

ಕನ್ನಡ ಕರಾವಳಿ ಸುದ್ದಿ: ಮದುವೆಗೆ ಕೆಲವೇ ಗಂಟೆಗಳು ಬಾಕಿ ಇತ್ತು. ಆದರೆ ರಸ್ತೆ ಅಪಘಾತದಲ್ಲಿ ವಧುವಿನ ಬೆನ್ನುಮೂಳೆಗೆ ಗಾಯವಾಯಿತು. ಪರಿಣಾಮ ಆಕೆ ಆಸ್ಪತ್ರೆ ಸೇರಿದಳು. ಇದರಿಂದ ಆಕೆಯ ಮದುವೆಯ ಕನಸು ನುಚ್ಚು ನೂರಾಗಬಹುದು ಎನ್ನುವ ಭಯ ಆಕೆಯ ಪೋಷಕರನ್ನು ಕಾಡತೊಡಗಿತ್ತು. ಆದರೆ ವರ ತೆಗೆದುಕೊಂಡ ನಿರ್ಧಾರ ಅವರಿಬ್ಬರ ಬದುಕನ್ನು ಬದಲಿಸಿತ್ತು.

ವಧು ಗಾಯಕ್ಕೆ ಒಳಗಾದ ಅನಂತರ ಅವರಿಬ್ಬರು ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ವಿವಾಹವಾಗಲು ನಿರ್ಧರಿಸಿದರು. ಸವಾಲಿನ ಪರಿಸ್ಥಿತಿಯ ನಡುವೆ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರ ಬೆಂಬಲದೊಂದಿಗೆ ಅವರ ವಿವಾಹವನ್ನು ಸರಳವಾಗಿ ನಡೆಸಲಾಯಿತು. ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ಶುಕ್ರವಾರ ವಧು, ಅವಳ ಪಕ್ಕದಲ್ಲಿ ವರ ನಿಂತು ದಾದಿಯರ ಸಮ್ಮುಖದಲ್ಲಿ ವಿವಾಹವಾದರು.

ಅಲಪ್ಪುಳದ ಕುಮಾರಕೋಮ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಧುವಿನ ಮೇಕಪ್‌ಗಾಗಿ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಅವನಿಯ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆಯ ಬೆನ್ನುಮೂಳೆಗೆ ತೀವ್ರ ಗಾಯವಾಗಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ ಅವರ ಗಾಯದ ತೀವ್ರತೆಯಿಂದಾಗಿ ವಿಶೇಷ ಚಿಕಿತ್ಸೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಿಸಲಾಯಿತು.

ಅಲಪ್ಪುಳದಲ್ಲಿ ಶುಕ್ರವಾರ ಮಧ್ಯಾಹ್ನ ಮದುವೆ ನಡೆಯಬೇಕಿತ್ತು. ಆದರೆ ವರ ಶರೋನ್ ಮತ್ತು ಅವರ ಕುಟುಂಬ ಆಸ್ಪತ್ರೆಗೆ ತಲುಪಿ ಅವನಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದ ಅನಂತರ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಆಸ್ಪತ್ರೆಯಲ್ಲೇ ವಿವಾಹವಾದರು.

 

Related Articles

Back to top button