ರಾಜಕೀಯ

ಕುರ್ಚಿ ಕದನ: ಹೈಕಮಾಂಡ್ ಬುಲಾವ್ ನಿರೀಕ್ಷೆಯಲ್ಲಿ ಸಿಎಂ, ಡಿಸಿಎಂ

Views: 3

ಕನ್ನಡ ಕರಾವಳಿ ಸುದ್ದಿ: ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬುಧವಾರ ತೆರೆ ಬಿದ್ದಿದ್ದು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಕುರ್ಚಿ ಕದನ ಆರಂಭವಾಗುವ ಸಾಧ್ಯತೆಗಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿ ನಡುವೆ ನಡೆಯುತ್ತಿರುವ ಅಧಿಕಾರ ಹಂಚಿಕೆ ಗುದ್ದಾಟ ಸಂಕ್ರಾಂತಿ ಹಬ್ಬದ ಬಳಿಕ ಬಿರು ಸಾಗಲಿದೆ ಎಂಬ ನಿರೀಕ್ಷೆ ಇತ್ತು. ಅಷ್ಟರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ತಂತ್ರಗಾರಿಕೆ ನಡೆಸಿ ಕೇಂದ್ರ ಸರಕಾರದ ವಿಬಿಜಿ ರಾಮ್ ಜಿ’ ಕಾಯ್ದೆ ವಿರೋಧಿಸಲು ದಿಢೀರನೇ ಜ.22ರಿಂದ ಅಧಿವೇಶನ ಕರೆಯುವ ಮೂಲಕ ಆಡಳಿತ ಪಕ್ಷದ ಚಟುವಟಿಕೆಗಳಿಗೆ ತಾತ್ಕಾಲಿಕ ತಡೆ ಹಾಕಿದ್ದರು. ಈಗ ಅಂತಿಮವಾಗಿ ಅಧಿವೇಶನಕ್ಕೆ ತೆರೆಬಿದ್ದಿದೆ. ಇನ್ನು ಮತ್ತೆ ಕುರ್ಚಿ ಕದನದ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ನಡೆದ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲೇಬೇಕು ಎಂದು ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಿಡಿದೇಳುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ್‌ ಬಣದ ಶಾಸಕರು ಕೂಡ ಸಂಘರ್ಷದ ಹಾದಿಗೆ ಕೈ ಜೋಡಿಸಲಿದ್ದು, ಅಗತ್ಯ ಬಿದ್ದರೆ ದೆಹಲಿಗೆ ತೆರಳಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯಾರು ಎಷ್ಟೇ ಹೇಳಿದರೂ ತಾವಂತೂ ಕೇಳುವುದಿಲ್ಲ ಎಂದು ಜಿದ್ದಿಗೆ ಬಿದ್ದಿರುವ ಡಿ.ಕೆ.ಶಿವಕುಮಾರ್‌ ಬಲವಂತವಾಗಿಯಾದರೂ ಅಧಿಕಾರ ಪಡೆದೇ ಪಡೆದುಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Related Articles

Back to top button
error: Content is protected !!