ಮಂಗಳೂರು :ಆಧಾರ್ ಸಂಖ್ಯೆ- ಹೆಬ್ಬೆರಳ ಗುರುತು ಸಂಗ್ರಹಿಸಿ ಹಣ ವರ್ಗಾವಣೆ: ಮೂವರು ಆರೋಪಿಗಳ ಬಂಧನ

Views: 1
ಮಂಗಳೂರು: ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ (AEPS)ಯಡಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದೀಪಕ್ ಕುಮಾರ್ ಹೆಂಬ್ರಮ್ (33), ವಿವೇಕ್‌ಕುಮಾರ್ ಬಿಸ್ವಾಸ್ (24), ಮದನ್ ಕಮಾರ್ (23) ಎಂದು ಗುರುತಿಸಲಾಗಿದೆ.
ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳಿಂದ 3,60,242 ರೂ.ಗಳ ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತಾಂತ್ರಿಕ ಪರಿಶೀಲನೆಗೊಳಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ರವಿವಾರ ನಗರ ಸಶಸ್ತ್ರ ಮೀಸಲು ಪಡೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಸಂಬಂಧಿಸಿ ಅವರು ಈ ಮಾಹಿತಿ ನೀಡಿದರು.
ಆರೋಪಿಗಳು ಆಸ್ತಿ ನೋಂದಣಿಗೆ ಸಂಬಂಧಿಸಿದ ಕಾವೇರಿ- 2.0 ವೆಬ್‌ಸೈಟ್‌ನಿಂದ ದಾಖಲಾತಿಗಳನ್ನು ಅಕ್ರಮವಾಗಿ ಪಡೆದು ಅದರಲ್ಲಿರುವ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತನ್ನು ಸಂಗ್ರಹಿಸಿ ಸ್ಕ್ಯಾನರ್ ಮೂಲಕ ಬೆರಳಚ್ಚು ಮುದ್ರೆಯನ್ನು ಸ್ಕ್ಯಾನ್ ಮಾಡಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಂದ ಹಣವನ್ನು ತಮ್ಮ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ.
ಕಳೆದ ಆರು ತಿಂಗಳಿನಿಂದ ಮಂಗಳೂರು ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿಸಿದ ಬಳಿಕ ಕೆಲ ನೋಂದಣಿದಾರರ ಹಣವು ಕಳೆದ ಎರಡು ತಿಂಗಳಿನಿಂದೀಚೆಗೆ ಅವರ ವಿವಿಧ ಬ್ಯಾಂಕ್‌ಗಳಿಂದ ಎಇಪಿಎಸ್ ಮೂಲಕ ವರ್ಗಾವಣೆ ಆಗಿರುವ ಬಗ್ಗೆ ಮಂಗಳೂರು ಸೆನ್ ಕ್ರೈ ಪೊಲೀಸ್ ಠಾಣೆಗೆ ಹಲವು ದೂರುಗಳು ಬಂದಿದ್ದು, 10 ದೂರುಗಳು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದರು.