ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸತೀಶ್ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವು

Views: 191
ಕನ್ನಡ ಕರಾವಳಿ ಸುದ್ದಿ: ಮಂಗಳೂರಿನ ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸತೀಶ್ ಆಚಾರ್ಯ ವೇಣೂರು(40) ಅವರು ಸೋಮವಾರ ಮುಂಜಾನೆ ನಡೆದ ಬೈಕ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಮುಗಿಸಿ ಮಂಗಳವಾರ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮವಾಗಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸತೀಶ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ತಾಯಿ, ಸಹೋದರಿ, ಸಹೋದರ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ವೇಣೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.
ಸತೀಶ್ ಆಚಾರ್ಯ ಭಾಗವತ ಮಾತ್ರವಲ್ಲದೆ, ವೇಷಧಾರಿಯಾಗಿ ಈ ಹಿಂದೆ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಈಗ ಮಂಗಳಾ ದೇವಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಕಾಲಿಕ ಸಾವಿಗೆ ಯಕ್ಷ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.






