ಆರೋಗ್ಯ

ಬೀಜಾಡಿಯಲ್ಲಿ ವಿಶ್ವ ರೇಬಿಸ್ ದಿನಾಚರಣೆ – ರೇಬಿಸ್ ನಿರೋಧಕ ಉಚಿತ ಲಸಿಕೆ – ಅರಿವು ಕಾರ್ಯಕ್ರಮ

ಕಠಿಣ ನಿಯಮಗಳಿಂದಾಗಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ತೊಡಕು - ಡಾ. ಹೆಗ್ಡೆ

Views: 76

ಕನ್ನಡ ಕರಾವಳಿ ಸುದ್ದಿ: ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಸರ್ಕಾರವು ರಾಜ್ಯದಾದ್ಯಂತ ಸೆ. 28ರಿಂದ ಅ. 28 ರವರೆಗೆ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕಾ ಹಾಗೂ ಅರಿವು ಆಂದೋಲನವನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಉಡುಪಿ ಜಿಲ್ಲಾ ಪಂಚಾಯತ್, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಕುಂದಾಪುರ ಹಾಗೂ ಬೀಜಾಡಿ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಕುಂದಾಪುರ ತಾಲೂಕಿನ 45ಗ್ರಾಮ ಪಂಚಾಯತ್ ಗಳಲ್ಲಿ ಅಭಿಯಾನ ಹಮ್ಮಿಕೊಂಡಿದ್ದು, ಈಗಾಗಲೇ 20 ಕಡೆಗಳಲ್ಲಿ ಪೂರೈಸಲಾಗಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 2030 ರೊಳಗೆ ದೇಶವನ್ನು ರೇಬಿಸ್ ಮುಕ್ತಗೊಳಿಸುವ ಕಾರ್ಯಕ್ರಮದನ್ವಯ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅರುಣ ಕುಮಾರ್ ಹೆಗ್ಡೆ ಹೇಳಿದರು.

ಬೀಜಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕಾ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೇಬಿಸ್ ರೋಗ, ಬೀದಿ ನಾಯಿ ಸಮಸ್ಯೆ ಮತ್ತು ಅವುಗಳ ನಿವಾರಣೋಪಾಯಗಳ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಾಣಿ ದಯಾ ಸಂಘದವರೊಂದಿಗೆ ಚರ್ಚಿಸಿ ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರನ್ವಯ ಜಿಲ್ಲೆ ಮತ್ತು ಪ್ರತಿ ತಾಲೂಕು ಗಳಲ್ಲಿ ಕನಿಷ್ಠ ಒಂದು ಎಕರೆ ಜಾಗ ಕೇಳಿದ್ದು, ಅಲ್ಲಿ ಸುಸಜ್ಜಿತ ಬೀದಿ ನಾಯಿ ಮತ್ತು ಅನಾಥ ನಾಯಿಗಳ ಪಾಲನಾ ಕೇಂದ್ರವನ್ನು ಆರಂಭಿಸಲಾಗುವುದು. ಕುಂದಾಪುರದಲ್ಲಿ ಐದು ಎಕರೆ ನಿವೇಶನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಲಸಿಕೆಯಿಂದ ರೇಬಿಸ್ ನಿರ್ಮೂಲನೆಗೊಳಿಸಬಹುದು. ಆದರೆ ನಾಯಿಗಳ ಸಂತಾನ ವೃದ್ಧಿಯಿಂದ ಸಮಸ್ಯೆ ಬೆಳೆಯುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.

ನಿಯಮಗಳು ಕಠಿಣವಿರುವುದರಿಂದ ಈಗ ಮೊದಲಿನಂತೆ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗದು. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನೂತನ ನಿಯಮದಂತೆ, ಇದಕ್ಕೆ ಕನಿಷ್ಠ ನೂರು ನಾಯಿಗಳನ್ನು ಉಪಚರಿಸಬಹುದಾದ, ಸುಸಜ್ಜಿತ ಆಪರೇಷನ್ ಥಿಯೇಟರ್ ಇರುವ ಜಾಗ ಬೇಕು. ಆಪರೇಷನ್ ನಂತರ ಮೂರು ದಿನ ನಾಯಿಗಳ ಶುಷ್ರೂಷೆ ನಡೆಸಿ, ಮತ್ತೆ ಅವುಗಳನ್ನು ಹಿಡಿದು ತಂದಲ್ಲಿಗೇ ಬಿಡಬೇಕು. ಇದನ್ನು ಕೂಡಾ ಅನುಮೋದಿತ ಏಜೆನ್ಸಿಯವರೇ ಮಾಡಬೇಕು. ಅವರಲ್ಲಿ ನುರಿತ ಡಾಕ್ಟರರು, ಸಿಬಂದಿಗಳು, 10 ಜನ ನಾಯಿ ಹಿಡಿಯುವವರು ಇರುತ್ತಾರೆ. ಕರ್ನಾಟಕದಲ್ಲಿ ಇಂತಹ ನಾಲ್ಕು ಏಜೆನ್ಸಿಗಳಿವೆ. ಇಷ್ಟೆಲ್ಲ ಇದ್ದರೆ ಮಾತ್ರ ಜಿಲ್ಲಾಧಿಕಾರಿಗಳು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಆಪರೇಷನ್ ಗೆ ಅನುಮತಿ ಕೊಡುತ್ತಾರೆ. ಆದ್ದರಿಂದ ಈ ಯೋಜನೆಗಾಗಿ ಗ್ರಾಮ ಪಂಚಾಯತ್ ಗಳು ಹಣ ಮೀಸಲಿಟ್ಟರೂ ಕೆಲಸ ಮಾಡಲು ತೊಂದರೆಯಾಗುತ್ತಿದೆ ಎಂಬ ವಿವರ ನೀಡಿದರು.

ಪಂಚಾಯತ್ ಸದಸ್ಯ ವಾದಿರಾಜ ಹೆಬ್ಬಾರ್ ಮಾತನಾಡಿ, ಸರ್ಕಾರ ಒಳ್ಳೆಯ ಯೋಜನೆ ರೂಪಿಸಿದ್ದರೂ ಅದರ ಅನುಷ್ಠಾನದಲ್ಲಿ ಲೋಪವಿರುವುದರಿಂದ ನಿರೀಕ್ಷಿತ ಯಶಸ್ಸು ಸಿಗದಾಗಿದೆ. ಕಳೆದ ವರ್ಷ ಬೀಜಾಡಿ ಪಂಚಾಯತ್ ಈ ಯೋಜನೆಯಡಿ 50 ನಾಯಿಗಳಿಗೆ ಆಪರೇಷನ್ ಮಾಡಿಸಿದೆ. ಆದರೆ ಏಜೆನ್ಸಿಯವರು ಎಲ್ಲ ಗಂಡು ನಾಯಿಗಳನ್ನೇ ಹಿಡಿದು ಆಪರೇಷನ್ ಮಾಡಿದ್ದರಿಂದ, ಎಲ್ಲೆಂದರಲ್ಲಿ ಅಲೆದಾಡುವ ಬೀದಿ ಬದಿಯ ಹೆಣ್ಣು ನಾಯಿಗಳಿಂದಾಗಿ ಸಂತಾನ ವೃದ್ಧಿ ಮುಂದುವರೆದಿದೆ ಎಂದು ಸಮಸ್ಯೆ ಬಿಚ್ಚಿಟ್ಟರು.

ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಯೋಜನೆ ಒಳ್ಳೆಯದಿದ್ದರೂ ಬೀದಿ ನಾಯಿಗಳನ್ನು ಹಿಡಿಯುವುದೇ ಸಮಸ್ಯೆಯಾಗಿದೆ ಎಂದರು.

ಪಂಚಾಯತ್ ಸದಸ್ಯರಾದ ಮಂಜುನಾಥ ಕುಂದರ್, ಸುಮತಿ ನಾಗರಾಜ್, ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಾಗರತ್ನ, ರೇಖಾ, ಕಿರಿಯ ಪಶುವೈದ್ಯ ಪರೀಕ್ಷಕ ದೇವಾನಂದ, ಹೊರಗುತ್ತಿಗೆ ನೌಕರರಾದ ಪ್ರಮೋದ್, ಅಶ್ವಿನಿ, ಪಂಚಾಯತ್ ಸಿಬಂದಿ ನಾರಾಯಣ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ಸಾಕು ನಾಯಿಗಳಿಗೆ ಲಸಿಕೆ ಹಾಕಲಾಯಿತು.  ಪಶು ಸಖಿ ಸಂಧ್ಯಾ ಸ್ವಾಗತಿಸಿ, ವಂದಿಸಿದರು.

Related Articles

Back to top button