ಬಿಜೆಪಿಯಲ್ಲಿ ಭಿನ್ನಮತೀಯ ಸಭೆ ಮತ್ತೆ ಮುನ್ನೆಲೆಗೆ; ಮುಂದುವರೆದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ!
Views: 79
ಕನ್ನಡ ಕರಾವಳಿ ಸುದ್ದಿ ರಾಜ್ಯ ಬಿಜೆಪಿಯಲ್ಲಿ ತಣ್ಣಗಾಗಿದ್ದ ಭಿನ್ನಮತ ಮತ್ತೆ ಮುನ್ನಲೆಗೆ ಬಂದಿದ್ದು, ಬಿಜೆಪಿಯ ಭಿನ್ನಮತೀಯ ನಾಯಕರು ಮತ್ತೆ ಸಭೆ ಸೇರಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಒತ್ತಡ ತಂತ್ರವನ್ನು ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿರುವ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ಧೇಶ್ವರ್ ರವುರ ನಿವಾಸದಲ್ಲಿ ನಿನ್ನೆ ರಾತ್ರಿ ಬಿಜೆಪಿಯ ಭಿನ್ನಮತೀಯ ಶಾಸಕರು ಸಭೆ ನಡೆಸಿ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿ, ದೆಹಲಿಯಾತ್ರೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡ ನಂತರ ಅವರ ವಿರುದ್ಧ ನಿಂತಿರುವ ಈ ಭಿನ್ನಮತೀಯ ನಾಯಕರು, ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಿಸಬೇಕು ಎಂದು ಆಗಾಗ್ಗೆ ಸಭೆ ಸೇರಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಮುಂದುವರೆಸಿದ್ದರು.
ಭಿನ್ನಮತೀಯರ ಚಟುವಟಿಕೆಯಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತಿದೆ ಎಂದು ವಿಜಯೇಂದ್ರ ಪರ ಇರುವ ಪಕ್ಷ ನಿಷ್ಠರು ಹೈ ಕಮಾಂಡ್‌ಗೆ ದೂರು ನೀಡಿದ ನಂತರ ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು.
ಹೈಕಮಾಂಡ್‌ನ ಈ ಕ್ರಮದಿಂದ ಸ್ವಲ್ಪ ಬೆದರಿದ ಭಿನ್ನಮತೀಯ ನಾಯಕರು ಯಾವುದೇ ಸಭೆಗಳನ್ನು ನಡೆಸದೆ ಮೌನಕ್ಕೆ ಶರಣಾಗಿದ್ದರು. ಈಗ ಮತ್ತೆ ಭಿನ್ನಮತೀಯ ಬಣದ ನಾಯಕರು ಸಭೆ ಸೇರಿರುವುದು ಬಿಜೆಪಿಯಲ್ಲಿ ಇನ್ನೂ ಭಿನ್ನಮತೀಯ ಚಟುವಟಿಕೆಗಳು ತಣ್ಣಗಾಗಿಲ್ಲ ಅದು ಬೂದಿ ಮುಚ್ಚಿದ ಕೆಂಡಂದಂತಿತಿದೆ ಎಂಬುದು ಜಗಜ್ಜಾಹೀರಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂರು ದಿನಗಳ ಹಿಂದೆಯಷ್ಟೇ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ನಂತರ ಮತ್ತೆ ಚುರುಕಾಗಿರುವ ಭಿನ್ನಮತೀಯರು ನಿನ್ನೆ ಸಭೆ ಸೇರಿ ಬಿಜೆಪಿಯ ಹೊಸ ಅಧ್ಯಕ್ಷರ ನೇಮಕದ ತಮ್ಮ ಹಳೆಯ ಬೇಡಿಕೆಯನ್ನು ಮುಂದಿಟ್ಟು ವರಿಷ್ಠರ ಮೇಲೆ ಒತ್ತಡ ಹೇರುವ ಕೆಲಸ ಮುಂದುವರೆಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಸಿದ್ಧೇಶ್ವರ್ ರವರ ನಿವಾಸದಲ್ಲಿ ಭಿನ್ನಮತೀಯ ಬಿಜೆಪಿಯಿಂದ ಉಚ್ಛಾಟನೆಯಾಗಿರುವ ಶಾಸಕ ಬಸನಗೌಡಪಾಟೀಲ್ ಯತ್ನಾಳ್, ಶಾಸಕರಾದ ಬಿ.ಪಿ. ಹರೀಶ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್‌ಸಿಂಹ ಪ್ರಕಾಶ್ ಖಂಡ್ರೆ ಸೇರಿದಂತೆ ಹಲವು ನಾಯಕರುಗಳು ಪಾಲ್ಗೊಂಡಿದ್ದರು.






