ಬಿಗ್ ಬಾಸ್ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಚೈತ್ರಾ ಕುಂದಾಪುರಗೆ ಮತ್ತೊಂದು ಸಂಕಷ್ಟ!
Views: 94
ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ 12 ಶೋನಲ್ಲಿ ಮತ್ತೆ ಸ್ಪರ್ಧಿಯಾಗಿ ತೆರಳಿದ್ದ ಚೈತ್ರಾ ಕುಂದಾಪುರ ಅವರ ವಿರುದ್ಧ ಕೋರ್ಟ್ ಆದೇಶ ಬಂದಿದೆ.
ಸ್ವತಃ ಚೈತ್ರಾ ಕುಂದಾಪುರ ಅವರ ತಂದೆಯೇ ಚೈತ್ರಾ ವಿರುದ್ಧ ಕೇಸ್ ಹಾಕಿದ್ದರು. ಪತ್ನಿ ಹಾಗೂ ಮಗಳಿಂದ ತಮಗೆ ಕಿರುಕುಳ ಆಗುತ್ತಿದೆ ಎಂದು ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ ಅವರು ದೂರು ನೀಡಿದ್ದರು.
ತಮಗೆ ನ್ಯಾಯ ದೊರಕಿಸಿಕೊಡುವಂತೆ ಬಾಲಕೃಷ್ಣ ಅವರು ಹಿರಿಯ ನಾಗರಿಕರ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಚೈತ್ರಾ ಕುಂದಾಪುರ ವಿರುದ್ಧ ಆದೇಶ ಬಂದಿದೆ. ನಿಯಮಾನುಸಾರ ಕ್ರಮ ಕೈಗೊಳ್ಳಲು ಕುಂದಾಪುರ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ಹಿರಿಯ ನಾಗರಿಕರ ನ್ಯಾಯಾಲಯವು ಚೈತ್ರಾ ಕುಂದಾಪುರ ವಿರುದ್ಧ ಆದೇಶ ನೀಡಿದೆ. ‘ಬಾಲಕೃಷ್ಣ ನಾಯ್ಕ ಅವರಿಗೆ ಯಾವುದೇ ದೈಹಿಕ, ಮಾನಸಿಕ ಕಿರುಕುಳ ನೀಡುವಂತಿಲ್ಲ. ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಡಬೇಕು’ ಎಂದು ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೇ, ಈ ಬಗ್ಗೆ ಚೈತ್ರಾ ಕುಂದಾಪುರ ಅವರಿಂದ ಸೂಕ್ತ ಮುಚ್ಚಳಿಕೆ ಪಡೆಯುವಂತೆ ಸೂಚಿಸಲಾಗಿದೆ.
ಬಾಲಕೃಷ್ಣ ನಾಯ್ಕ ಅವರಿಗೆ ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ನಿಯಮಗಳು ಅಡಿಯಲ್ಲಿ ರಕ್ಷಣೆ ನೀಡಲಾಗಿದೆ. ಇದರ ಅನ್ವಯ ಕುಂದಾಪುರ ಪೊಲೀಸರು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಿದ್ದಾರೆ. ಇದರಿಂದ ಚೈತ್ರಾ ಕುಂದಾಪುರ ಅವರ ಬಿಗ್ ಬಾಸ್ ಆಟಕ್ಕೆ ತೊಂದರೆ ಆಗುತ್ತಾ ಎಂಬ ಪ್ರಶ್ನೆ ಉದ್ಭವ ಆಗಿದೆ.
ಈ ಮೊದಲು ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಸಂಘರ್ಷ ತಾರಕಕೇರಿತ್ತು. ಚೈತ್ರಾ ಮದುವೆ ವೇಳೆ ಬಾಲಕೃಷ್ಣ ಅವರ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ತಂದೆಯ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಪರೋಕ್ಷವಾಗಿ ಚೈತ್ರಾ ಕುಂದಾಪುರ ಅವರ ಕಿಡಿಕಾರಿದ್ದರು. ಈ ಎಲ್ಲ ಕಾರಣಗಳಿಂದ ಅವರ ಕುಟುಂಬದಲ್ಲಿ ಬಿರುಕು ಮೂಡಿತ್ತು.
ಬಿಗ್ ಬಾಸ್ ಕನ್ನಡ 11ನೇ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಸ್ಪರ್ಧಿಸಿದ್ದರು. ಈಗ ಅವರು “ಬಿಗ್ ಬಾಸ್ ಕನ್ನಡ ಸೀಸನ್ 12′ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದಾರೆ. ಕೋರ್ಟ್ ಆದೇಶದ ಪರಿಣಾಮದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾದ ಪ್ರಮೇಯ ಬರುತ್ತಾ ಎಂಬುದನ್ನು ಕಾದುನೋಡಬೇಕು.






