ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದು ಮನೆಯೊಳಗೆ ಹೂತು ಹಾಕಿದ ಪತ್ನಿ, ಸುಳಿವು ನೀಡಿದ ಹೊಸ ಟೈಲ್ಸ್

Views: 197
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನ ನೆರವಿನಿಂದ ಪತಿಯನ್ನು ಕೊಂದ ಮತ್ತೊಂದು ಪ್ರಕರಣ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಘಟನೆ ಬಯಲಾಗದಂತೆ ತಡೆಯಲು ಹತ್ಯೆಯ ಬಳಿಕ ಪತಿಯ ಶವವನ್ನು ಮನೆಯೊಳಗೇ ಹೂತು ಹಾಕಲಾಗಿದೆ.
ಸಹೋದರರು ಮೃತನನ್ನು ಹುಡುಕಿಕೊಂಡು ಬಂದಾಗ, ಕೃತ್ಯವು ಬಯಲಾಗಿದೆ. ಮನೆಯೊಳಗಿನ ಒಂದು ಭಾಗದಲ್ಲಿ ಹೊಸ ಟೈಲ್ಸ್ ಹಾಕಿದ್ದು, ಅನುಮಾನ ಮೂಡಿಸಿದೆ. ಟೈಲ್ಸ್ ಕೆಳಭಾಗವನ್ನು ಅಗೆದು ನೋಡಿದಾಗ ಶವ ಪತ್ತೆಯಾಗಿದೆ. ಇದರ, ಬೆನ್ನಲ್ಲೇ ಪತ್ನಿಯು ಮಕ್ಕಳೊಂದಿಗೆ ಪರಾರಿಯಾಗಿದ್ದಾಳೆ.
ಪ್ರಕರಣದ ವಿವರ: ಮಹಾರಾಷ್ಟ್ರದ ಪಾಲ್ಘರ್‌ನ ನಲಸೋಪುರದಲ್ಲಿ ಈ ಪ್ರಕರಣ ನಡೆದಿದೆ. ವಿಜಯ್ ಚೌಹಾಣ್ (40) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಚಮನ್ ಚೌಹಾಣ್ ಮತ್ತು ಆಕೆಯ ಪ್ರಿಯಕರ ಮೋನು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೆಲ್ಹಾರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿತೇಂದ್ರ ವಂಕೋಟಿ, ಕಳೆದ 15 ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದೆ. ಮೃತನ ಸಹೋದರರು ಹೊಸ ಮನೆ ಖರೀದಿಸುವ ಸಲುವಾಗಿ ಹಣದ ನೆರವಿಗಾಗಿ ವಿಜಯ್ ಅವರಿಗೆ ಜುಲೈ 10 ರಂದು ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದೆ. ನೇರವಾಗಿ ಭೇಟಿ ಮಾಡಲು ಮನೆಗೆ ಬಂದಿದ್ದಾರೆ.
ಸುಳಿವು ನೀಡಿದ ಹೊಸ ಟೈಲ್ಸ್: ಈ ವೇಳೆ, ವಿಜಯ್ ಅವರು ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಪತ್ನಿ ವಿಚಾರಿಸಿದಾಗ, ದೂರದ ಊರಿಗೆ ಕೆಲಸದ ಮೇಲೆ ಹೋಗಿದ್ದಾಗಿ ತಿಳಿಸಿದ್ದಾರೆ. ಬಳಿಕ ಜುಲೈ 19 ರಂದು ಮತ್ತೊಮ್ಮೆ ಕರೆ ಮಾಡಿದಾಗಲೂ ಸ್ವಿಚ್ಡ್ ಆಫ್ ಬಂದಿದೆ. ಸಹೋದರರು ಮನೆಗೆ ಬಂದಾಗ, ಪತ್ನಿಯೂ ಅಲ್ಲಿ ಇರಲಿಲ್ಲ. ಮನೆಯನ್ನು ಪರಿಶೀಲಿಸಿದಾಗ, ಒಳಭಾಗದಲ್ಲಿ ಹೊಸ ಟೈಲ್ಸ್‌ಗಳು ಕಂಡು ಬಂದಿವೆ. ಅನುಮಾನಗೊಂಡು, ಟೈಲ್ಸ್‌ಗಳನ್ನು ತೆಗೆದಾಗ ನೆಲದಿಂದ ಕೆಟ್ಟ ವಾಸನೆ ಬಂದಿದೆ ಎಂದು ಅವರು ತಿಳಿಸಿದರು.
ತಕ್ಷಣವೇ ಸಹೋದರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಸಿಬ್ಬಂದಿ ಮನೆಯಲ್ಲಿ ಗುಂಡಿ ತೋಡಿದಾಗ ಅದರಲ್ಲಿ ಕೊಳೆತ ಶವ ಸಿಕ್ಕಿದೆ. ಮೃತ ದೇಹವನ್ನು ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ನೆರೆ ಹೊರೆಯವರನ್ನು ವಿಚಾರಿಸಿದಾಗ, ಚೌಹಾಣ್ ಅವರು ಜುಲೈ 10 ರಿಂದ ಅವರ ಪತ್ನಿ ಜುಲೈ 19 ರಿಂದ ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.