ಪುತ್ತೂರು:ನಾಪತ್ತೆಯಾಗಿದ್ದ ಮಹಿಳೆಯ ಅಸ್ತಿಪಂಜರ ಪತ್ತೆ, ಆತ್ಮಹತ್ಯೆಯೋ.. ಕೊಲೆಯೋ ?

Views: 80
ಪುತ್ತೂರು: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ತಲೆ ಬುರುಡೆ ಹಾಗೂ ಎಲುಬು ಪತಿಯ ಮನೆಯ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ಮೂಡಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂಬುದರ ಬಗ್ಗೆ ಸ್ಥಳೀಯರಲ್ಲಿ ಸಂಶಯ ಮತ್ತು ಚರ್ಚೆ ನಡೆದಿದೆ.
ಇಲ್ಲಿನ ನಿವಾಸಿ ಸಂಜೀವ ಅವರ ಪತ್ನಿ ನಳಿನಿ( 32) ಮೃತಪಟ್ಟವರು. ವಿಟ್ಲ ಸಮೀಪದ ಕನ್ಯಾನದವರಾಗಿದ್ದು, ಒಂದು ವರ್ಷದ ಹಿಂದೆ ಸಂಜೀವನ ಜೊತೆ ವಿವಾಹವಾಗಿತ್ತು
ಆಗಸ್ಟ್ 8ರಂದು ಸಂಜೀವ ಅವರು ಪತ್ನಿ ನಾಪತ್ತೆ ಕುರಿತು ಪತಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪತ್ನಿಯ ಫೋಟೋ ನೀಡುವಂತೆ ಪೊಲೀಸರು ತಿಳಿಸಿದ್ದು, ತರುವುದಾಗಿ ಹೇಳಿ ಹೋಗಿದ್ದ ಸಂಜೀವ ಮತ್ತೆ ಠಾಣೆಗೆ ಬರಲಿಲ್ಲ. ವಿವಾಹದ ಬಳಿಕ ನಳಿನಿ ಆಗಾಗ ತವರು ಮನೆಗೆ ಹೋಗುತ್ತಿದ್ದರಿಂದ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು.
ನಳಿನಿ ಅವರು ಸಂಪರ್ಕಕ್ಕೆ ಸಿಗದೇ ಇರುವುದರಿಂದ ತವರು ಮನೆಯವರು ನವೆಂಬರ್ 2 ರಂದು ಆಕೆಯನ್ನು ಹುಡುಕಿಕೊಂಡು ಪತಿಯ ಮನೆಗೆ ಬಂದಿದ್ದರು. ಆಗ ಆಕೆ ನಾಪತ್ತೆಯಾಗಿರುವ ಸಂಗತಿ ತಿಳಿಯಿತು. ಹೀಗಾಗಿ ಹುಡುಕಾಡಿದಾಗ ಗುಡ್ಡದ ತುದಿಯಲ್ಲಿ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಹಗ್ಗ ಪತ್ತೆಯಾಗಿದ್ದು, ಅದರಲ್ಲಿ ತಲೆ ಕೂದಲು ಪತ್ತೆಯಾಗಿದೆ. ಹಗ್ಗದ ಕೆಳಗೆ ತಲೆ ಬುರುಡೆ, ಕೈ ಮತ್ತು ಕಾಲಿನ ಎಲುಬುಗಳು ಪತ್ತೆಯಾಗಿವೆ. ಇದು ನಳಿನಿಯವರದ್ದು ಎಂದು ದೃಡಪಡಿಸಲಾಯಿತು.
ಅವಶೇಷಗಳನ್ನು ಗಮನಿಸಿದಾಗ ಒಂದು ತಿಂಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಊಹಿಸಲಾಗಿದೆ.ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.