ರಾಜಕೀಯ

ನಾಯಕತ್ವ ಬದಲಾವಣೆ ಭಾರೀ ರೋಚಕ ಘಟ್ಟಕ್ಕೆ; ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ!

Views: 54

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ರೋಚಕ ಘಟ್ಟ ತಲುಪಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿತ ಓರ್ವ ಸಚಿವರು ಹಾಗೂ ಕೆಲವು ಶಾಸಕರು ಗುರುವಾರ ದಿಢೀರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ ನಲ್ಲಿ ಭುಗಿಲೆದಿದ್ದು, ಡಿಕೆ ಶಿವಕುಮಾರ್ ಪರವಾಗಿರುವ ಶಾಸಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಇನ್ನೂ ಎರಡೂವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಐದು ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಮೇ 20, 2023 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆಗ ಹೈಕಮಾಂಡ್ ಡಿಕೆ ಶಿವಕುಮಾರ್ ಅವರ ಮನವೊಲಿಸಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅಲ್ಲದೇ ಅಧಿಕಾರ ಹಂಚಿಕೆ ಸೂತ್ರ”ದ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲಾಗಿದೆ. ಅದರ ಪ್ರಕಾರ ಶಿವಕುಮಾರ್ ಎರಡೂವರೆ ವರ್ಷಗಳ ನಂತರ ಸಿಎಂ ಆಗುತ್ತಾರೆ ಎನ್ನಲಾಗಿತ್ತು. ಆದರೆ ಪಕ್ಷ ಅಧಿಕೃತವಾಗಿ ಏನನ್ನೂ ಹೇಳಿರಲಿಲ್ಲ. ಆದಾಗ್ಯೂ, ಈ ವರದಿಗಳನ್ನು ಸಿದ್ದರಾಮಯ್ಯ ನಿರಾಕರಿಸಿದ್ದು, ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುತ್ತಿದ್ದಾರೆ.

ಕೆಲವು ಶಿವಕುಮಾರ್ ಪರ ಬೆಂಬಲಿಗರು ತಮ್ಮ ನಾಯಕನಿಗೆ ಸಿಎಂ ಹುದ್ದೆ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮೂಲಗಳ ಪ್ರಕಾರ ಸಚಿವ ಎನ್ ಚಲುವರಾಯಸ್ವಾಮಿ, ಶಾಸಕರಾದ ಇಕ್ಬಾಲ್ ಹುಸೇನ್, ಹೆಚ್. ಸಿ ಬಾಲಕೃಷ್ಣ ಮತ್ತು ಎಸ್ ಆರ್ ಶ್ರೀನಿವಾಸ್ ಗುರುವಾರ ದೆಹಲಿಗೆ ತೆರಳಿದ್ದಾರೆ. ಶುಕ್ರವಾರ ಇನ್ನೂ ಹನ್ನೆರಡು ಶಾಸಕರು ದೆಹಲಿ ತಲುಪುವ ಸಾಧ್ಯತೆಯಿದೆ.

Related Articles

Back to top button
error: Content is protected !!