ನಟಿ ರಮ್ಯಾಗೆ ಅಶ್ಲೀಲ ಸಂದೇಶ ಇಬ್ಬರ ಬಂಧನ ಉಳಿದವರಿಗೆ ತೀವ್ರ ಶೋಧ

Views: 46
ಕನ್ನಡ ಕರಾವಳಿ ಸುದ್ದಿ :ಸ್ಯಾಂಡಲ್ ವುಡ್ ನಟಿ ರಮ್ಯಾ ದೂರು ಅನ್ವಯ ಸಾಮಾಜಿಕ ಜಾಲತಾಣದಲ್ಲಿ ಬಂದ ಕಾಮೆಂಟ್, ಮೆಸೇಜ್‌ಗಳನ್ನು ಪರಿಶೀಲಿಸಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ 13 ಮಂದಿಯನ್ನು ಗುರುತಿಸಿ ಇಬ್ಬರನ್ನು ಬಂಧಿಸಿ ಉಳಿದವರನ್ನು ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿರುವವರು ಅಕ್ಕಪಕ್ಕದ ಜಿಲ್ಲೆಗಳವರು, ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಈ ರೀತಿಯ ಕೃತ್ಯಗಳನ್ನು ತಡೆಯಲು ಮಾನಿಟರಿಂಗ್ ಟೀಂಗಳಿಗೆ ಹೆಚ್ಚಿನ ತರಬೇತಿ ಕೊಡಿಸಿ ಚುರುಕುಗೊಳಿಸಲಾಗಿದೆ. ಸಿಸಿಬಿ ಹಾಗೂ ನಗರದ 8 ಸೈಬರ್ ಕ್ರೈಂ ಠಾಣೆಗಳ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದೆಯೂ ಸಹ ಯಾರಾದರೂ ಈ ರೀತಿ ಇತರರ ಬಗ್ಗೆ ಅಶ್ಲೀಲ ಸಂದೇಶ, ಕಾಮೆಂಟ್ ರವಾನಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಸುಮಾರು 50 ಖಾತೆಗಳ ಬಳಕೆದಾರರನ್ನು ಪತ್ತೆಹಚ್ಚಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ನಗರದ ಹೊರವಲಯದಲ್ಲಿನ ಕೆಲ ವ್ಯಕ್ತಿಗಳ ಖಾತೆಗಳಿಂದಲೂ ಮೆಸೇಜ್? ಹಾಗೂ ಕಾಮೆಂಟ್ ಮಾಡಿರುವುದು ತಿಳಿದು ಬಂದಿದ್ದು, ಅವುಗಳ ಬಳಕೆದಾರರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಬಳ್ಳಾರಿ ಮೂಲದ ಓರ್ವ, ಚಿತ್ರದುರ್ಗದ ಮೂಲದ ಓರ್ವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.






