ದೇವಸ್ಥಾನಕ್ಕೆ ಹೋದ ಬಾಲಕನ ಶವ ಪತ್ತೆ, ತಲೆಗೆ ಏಟು, ಕೊಲೆ ಶಂಕೆ!
Views: 138
ಕನ್ನಡ ಕರಾವಳಿ ಸುದ್ದಿ :ದಕ್ಷಿಣ ಕನ್ನಡದಲ್ಲಿ ಘೋರ ದುರಂತ ನಡೆದಿದ್ದು, ದೇವಸ್ಥಾನಕ್ಕೆಂದು ಹೋಗಿದ್ದ ಬಾಲಕನ ಶವ ಸಂಶಯಾಸ್ಪದ ರೀತಿಯಲ್ಲಿ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ಎಂಬಲ್ಲಿ ನಡೆದಿದೆ. ಸಂಬೋಳ್ಯ ಎಂಬಲ್ಲಿಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂದಿನಂತೆ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಧನು ಪೂಜೆಗಾಗಿ ಬೆಳಗ್ಗೆ 5ರ ಸುಮಾರಿಗೆ ಮನೆಯಿಂದ ತೆರಳಿದ್ದಾನೆ.
ಆದರೆ ಅತ್ತ ದೇವಸ್ಥಾನಕ್ಕೂ ಹೋಗದೆ, ಮನೆಗೂ ಹಿಂದಿರುಗದೇ ಇದ್ದಾಗ ಮನೆಯವರು ಗಾಬರಿಗೊಂಡು ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾಲಕ ಹೋಗಿದ್ದ ದಾರಿಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಚಿರತೆ ಕೊಂಡೊಯ್ದಿರಬಹುದು ಎಂಬ ಸಂಶಯ ಸ್ಥಳೀಯರಲ್ಲಿ ಮೂಡಿತ್ತು. ತಕ್ಷಣ ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತಲೆಯ ಹಿಂಭಾಗ ಗಂಭೀರ ರೀತಿಯಲ್ಲಿ ಎರಡು ಗಾಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ವಾನ ದಳ, ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ತಲೆಗೆ ಬಲವಾದ ಏಟು, ಕೊಲೆಯ ಸಂಶಯ:
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿನ ಜಿಲ್ಲಾ ವೆನ್ಹಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಪ್ರಾಥಮಿಕ ವರದಿ ಪ್ರಕಾರ, ಸುಮಂತ್ನ ತಲೆಗೆ ಕತ್ತಿ ಅಥವಾ ಇನ್ನಿತರ ಆಯುಧಗಳಿಂದ ಬಲವಾದ ಮೂರು ಏಟು ನೀಡಿರುವ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ತಲೆಗೆ ಏಟು ಬಿದ್ದ ಕೂಡಲೇ ಪ್ರಜ್ಞೆ ತಪ್ಪಿದ್ದರಿಂದ ಸುಮಂತ್ ಯಾವುದೇ ಪ್ರತಿರೋಧ ನೀಡಲು ಸಾಧ್ಯವಾಗಿಲ್ಲ ಎಂದು ಶಂಕಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದೇಹ ಪತ್ತೆಯಾದಾಗ ಸುಮಂತನ ಕಾಲಿನಲ್ಲಿ ಚಪ್ಪಲಿಗಳಿದ್ದವು. ಇದರಿಂದ ಅರೆಪ್ರಜ್ಞಾವಸ್ಥೆಯಲ್ಲೇ ಕೆರೆ ಬಳಿಗೆ ಎತ್ತಿಕೊಂಡು ಹೋಗಿ ನೀರಿಗೆ ಹಾಕಿರುವ ಸಾಧ್ಯತೆಯಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.






