ದಾಳಿಗೆ ಬಲಿಯಾದ ಮಂಜುನಾಥರಾವ್ ಪಾರ್ಥಿವ ಶರೀರ ಅಂತಿಮ ಯಾತ್ರೆ

Views: 51
ಕನ್ನಡ ಕರಾವಳಿ ಸುದ್ದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥರಾವ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಐಬಿ ಸರ್ಕಲ್ ಮೂಲಕ, ಕುವೆಂಪು ರಸ್ತೆ, ಜೈಲ್ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪಶೆಟ್ಟಿ ಸರ್ಕಲ್ ಮೂಲಕ ಅಮೀರ್ ಅಹಮದ್ ವೃತ್ತ ದಾಟಿ ಬಿಹೆಚ್ ರಸ್ತೆ ಮೂಲಕ ರೋಟರಿ ಚಿತಾಗಾರದತ್ತ ಸಾಗಿದೆ.
ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೆ ಘೋಷಣೆಗಳು ಮೊಳಗಿದವು.
ಶಾಸಕ ಎಸ್.ಎನ್. ಚನ್ನಬಸಪ್ಪ, ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಾಲತೇಶ್ ಮತ್ತಿತರರು ನಡೆದುಕೊಂಡೆ ಅಂತಿಮ ಯಾತ್ರೆಯಲ್ಲಿ ಸಾಗಿದರೆ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಂಜುನಾಥ್ ಅವರ ಪತ್ನಿ ಪಲ್ಲವಿ, ಪುತ್ರ ಅಭಿಜೇಯ ಸಂಬಂಧಿಕರೊಂದಿಗೆ ಪಾರ್ಥಿವ ಶರೀರವಿದ್ದ ತೆರೆದ ವಾಹನದಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಗೌರವ ಸೂಚಿಸಿದರೆ, ಸಾರ್ವಜನಿಕರು ಮಂಜುನಾಥರಾವ್ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಮೆರವಣಿಗೆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದಕ್ಕೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಕೆ.ಎಸ್. ಈಶ್ಜರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್ ಮತ್ತಿತರರು ಮಂಜುನಾಥ್‌ರಾವ್ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.