ತೆಂಗಿನ ಮರವೇರಿ ಕಾಯಿ ತೆಗೆಯುವ ಕೂಲಿ ಕಾರ್ಮಿಕ, ಮ್ಯಾರಥಾನ್ ಸಾಸ್ತಾನ ವಿಠಲ ಶೆಟ್ಟಿಗಾರರಿಗೆ ಸಿಎಂ ಪ್ರಶಸ್ತಿ ಸನ್ಮಾನ

Views: 157
ಉಡುಪಿ: ಗುಂಡ್ಮಿ ಸಾಸ್ತಾನದ ವಿಠಲ ಶೆಟ್ಟಿಗಾರರು ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭ ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಸನ್ಮಾನ ಪಡೆದುಕೊಂಡಿದ್ದಾರೆ.

ಗುರುಗಳಿಲ್ಲದೆ ನಿರಂತರ ಕಠಿಣ ಸ್ವ ಅಭ್ಯಾಸದಿಂದ ತೆಂಗಿನ ಮರವೇರಿ ಕಾಯಿ ತೆಗೆಯುವ ಕೂಲಿ ಕಾರ್ಮಿಕ ವಿಠಲ ಶೆಟ್ಟಿಗಾರ್ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿದ್ದಲ್ಲದೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಪ್ರಶಸ್ತಿ ಪಡೆದುಕೊಂಡಿದ್ದಾರೆ.
15 ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಗೆದ್ದವರು ನಂತರ ಕ್ರೀಡಾ ಕ್ಷೇತ್ರದಿಂದ ಹಿಂದಿರುಗಿ ನೋಡದೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ವೇಗದ ನಡಿಗೆ ಮ್ಯಾರಥಾನ್ ನಲ್ಲಿ ಭಾಗವಹಿಸಿರುತ್ತಾರೆ.
ಇದುವರೆಗೆ ಹಾಫ್ ಮ್ಯಾರಥಾನ್ ನಲ್ಲಿ 31 ಪದಕ, 10 ಸಾವಿರ ಮೀಟರ್ ನಲ್ಲಿ 25ಕ್ಕೂ ಹೆಚ್ಚು ಪದಕ, 45 ಕಿ.ಮೀ ಫುಲ್ ಮ್ಯಾರಥಾನ್ ನಲ್ಲಿ ಒಂದು ಪದಕ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ.
ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ವಿಠಲ ಶೆಟ್ಟಿಗಾರ್ ಅವರು ಥೈಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 800 ಮೀಟರ್, 1500 ಮೀಟರ್,5000 ಕಿ.ಮೀಟರ್ ಮ್ಯಾರಥಾನ್, ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
60ರ ಹರೆಯದ ವಿಠಲ ಶೆಟ್ಟಿಗಾರ್ ಕೂಲಿ ಮಾಡುತ್ತಲೇ ಕಠಿಣ ಅಭ್ಯಾಸದಿಂದ ಉತ್ತುಂಗಕ್ಕೆ ಬೆಳೆದು, ತಾನು ಬೆಳೆಯುವುದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೂ ತರಬೇತಿ ನೀಡಿರುತ್ತಾರೆ.
ಬಡತನದಲ್ಲಿಯೇ ಜೀವನ ನಡೆಸುತ್ತಿರುವ ಇವರಿಗೆ ಮೂರು ಜನ ಹೆಣ್ಣು ಮಕ್ಕಳು,ತೆಂಗಿನ ಮರವೇರಿ ಕಾಯಿ ಕೀಳುವ ಮತ್ತು ಕೂಲಿಯೇ ಜೀವನಾಧಾರ. ಬಾಲ್ಯದಿಂದಲೇ ಇವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.






