ಸಾಂಸ್ಕೃತಿಕ

ತೆಂಕು-ಬಡಗಿನ ಯಕ್ಷಗಾನದ ಅಗ್ರಗಣ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ನಿಧನ 

Views: 29

ಕನ್ನಡ ಕರಾವಳಿ ಸುದ್ದಿ: ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ, ಯಕ್ಷಗುರು ಸೂರಿಕುಮೇರು ಗೋವಿಂದ ಭಟ್ಟ (88) ಶುಕ್ರವಾರ ರಾತ್ರಿ ಶಿವಮೊಗ್ಗದ ತೀರ್ಥಹಳ್ಳಿ ಹೆದ್ದೂರಿನಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು ಇದ್ದಾರೆ.

ಯಕ್ಷಗಾನ ಪಾತ್ರಧಾರಿಯಾಗಿ, ಅರ್ಥಧಾರಿಯಾಗಿ, ಗುರುವಾಗಿ, ಯಕ್ಷ ಕಲೆಯ ಸರ್ವಾಂಗಗಳನ್ನು ಬಲ್ಲವರಾಗಿದ್ದರು. ಸೂರಿ ಕುಮೇರಿನ ಕೆ. ಗೋವಿಂದ ಭಟ್ಟರು ತೆಂಕು-ಬಡಗು ತಿಟ್ಟುಗಳಲ್ಲಿ ನಾಯಕ ಪ್ರತಿ ನಾಯಕ ಪಾತ್ರಗಳನ್ನಷ್ಟೇ ಅಲ್ಲದೆ ಸ್ತ್ರೀ ವೇಷ ಬಣ್ಣದ ವೇಷಗಳನ್ನು ಕೂಡ ಮಾಡಬಲ್ಲವರಾಗಿದ್ದ ಅವರ ನಿಧನದಿಂದ ಯಕ್ಷಗಾನ ಕಲಾ ಕ್ಷೇತ್ರಕ್ಕೆ ಬಲು ದೊಡ್ಡ ನಷ್ಟವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕನಿಲದಲ್ಲಿ ಜನಿಸಿದ ಗೋವಿಂದ ಭಟ್ಟ ನಂತರ ಕಲ್ಲಡ್ಕ ಸಮೀಪದ ಸೂರಿಕುಮೇರುವಿನಲ್ಲಿ ವಾಸವಾಗಿದ್ದರು. ಈಚೆಗೆ ಕೆಲವು ವರ್ಷಗಳಿಂದ ತೀರ್ಥಹಳ್ಳಿಯಲ್ಲಿದ್ದರು. ಪುತ್ರರಾದ ಪ್ರಸನ್ನ ಕುಮಾರ್ ಮತ್ತು ಶ್ಯಾಂ ಪ್ರಸಾದ್ ತೀರ್ಥಹಳ್ಳಿಯಲ್ಲಿದ್ದು ಸೂರ್ಯ ಭಟ್ಟ ಸೂರಿಕುಮೇರುವಿನಲ್ಲಿ ನೆಲೆಸಿದ್ದಾರೆ. ಪತ್ನಿ ಆರು ವರ್ಷಗಳ ಹಿಂದೆ ಮಾರ್ಚ್ 20ರಂದೇ ತೀರಿಕೊಂಡಿದ್ದರು ಎಂದು ಸೂರ್ಯ ಭಟ್ಟ ತಿಳಿಸಿದರು.

7ನೇ ತರಗತಿ ವರೆಗೆ ಓದಿದ್ದ ಗೋವಿಂದ ಭಟ್ಟ 1951ರಲ್ಲಿ ಮೇಳಕ್ಕೆ ಸೇರಿ ಕುರಿಯ ವಿಠಲ ಶಾಸ್ರ್ರಿ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ನಾಟ್ಯ ಕಲಿತು ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ ಮತ್ತು ಇರಾ ಸೋಮನಾಥೇ‌ಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿರುತ್ತಾರೆ. ಕೌರವ, ರಕ್ತಬೀಜ, ಇಂದ್ರಜಿತು ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಂಮ್ರಾಕ್ಷ ಕನಕಕಶಿಪು, ದೇವೇಂದ್ರ ಅರ್ಜುನ ಹನುಮಂತ, ಭೀಷ್ಮ ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು.

ನಿರಂತರ 71 ತಿರುಗಾಟಗಳನ್ನು ಮಾಡಿದ್ದ ಅವರು ಬಾಲವೇಷದಿಂದ ಹಿಡಿದು ಸ್ತ್ರೀ ವೇಷ, ಪುಂಡುವೇಷ ಮುಂತಾಗಿ ಎಲ್ಲ ವೇಷಗಳನ್ನು ನಿರ್ವಹಿಸಿದ್ದಾರೆ. ಅರ್ಥಧಾರಿಯಾಗಿಯೂ ಹೆಸರು ಗಳಿಸಿದ್ದ ಅವರನ್ನು ಯಕ್ಷಗಾನದ ಸರ್ವಾಂಗ ಕಲಾವಿದ ಎಂದೇ ಕರೆಯಲಾಗುತ್ತದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Related Articles

Back to top button
error: Content is protected !!