ಸಾಂಸ್ಕೃತಿಕ

ತೆಂಕುತಿಟ್ಟಿನ ಯಕ್ಷಗಾನದ ಹೆಸರಾಂತ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ವಿಧಿವಶ

Views: 136

ಕನ್ನಡ ಕರಾವಳಿ ಸುದ್ದಿ:ತೆಂಕುತಿಟ್ಟಿನ ಹೆಸರಾಂತ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಜುಲೈ 20 ರಂದು ವಿಧಿವಶರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಶ್ರೀ ಕಟೀಲು ಮೇಳದಲ್ಲಿ ಯಕ್ಷಯಾತ್ರೆ ಆರಂಭಿಸಿ 10 ವರ್ಷಗಳ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ 13 ವರ್ಷ, ಹೊಸನಗರ ಮೇಳದಲ್ಲಿ 19 ವರ್ಷ, ಎಡನೀರು ಮೇಳದಲ್ಲಿ 1 ವರ್ಷ ಯಕ್ಷ ಸೇವೆ ಸಲ್ಲಿಸಿದ ಅವರು ಕಳೆದ 8 ವರ್ಷಗಳಿಂದ ಶ್ರೀ ಹನುಮಗಿರಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಒಟ್ಟು 42 ವರ್ಷಗಳ ಕಾಲ ತಿರುಗಾಟ ಪೂರೈಸಿದ್ದರು.1965ರಲ್ಲಿ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾ‌ರ್ ಮತ್ತು ಗಿರಿಯಮ್ಮ ದಂಪತಿಯ ಪುತ್ರನಾಗಿ ಅವರು ಜನಿಸಿದರು. ಸಿದ್ಧಕಟ್ಟೆ ಸೈಂಟ್‌ ಮೆಟ್ರಿಕ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರ ಯಕ್ಷಗಾನ ಆಸಕ್ತಿ ರಂಗಸ್ಥಳದವರೆಗೆ ಕರೆದೊಯ್ದಿತು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕುರಿತು ಕಲಿತುಕೊಂಡ ಅವರು ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯಡರಿಂದ ತರಬೇತಿ ಪಡೆದಿದ್ದರು.

ರಾವಣ, ಕುಂಭಕರ್ಣ, ಮಹಿಷಾಸುರ, ವರಾಹ, ಸಿಂಹ, ಗಜೇಂದ್ರ ಮುಂತಾದ ಬಣ್ಣದ ವೇಷಗಳು, ಶೂರ್ಪನಖಿ, ಅಜಮುಖ, ಪೂತನಿ, ಪ್ರತ್ರಜ್ವಾಲೆ ಮುಂತಾದ ಹೆಣ್ಣು ಬಣ್ಣ ಪಾತ್ರಗಳಿಗೆ ಜೀವ ತುಂಬಿದ್ದ ಅವರು ಸೈ ಎನಿಸಿಕೊಂಡಿದ್ದಾರೆ. ಶ್ರೀರಾಮ ಕಾರುಣ್ಯ ಪ್ರಸಂಗದ ಕಾಕಾಸುರನ ಪಾತ್ರ ಅವರ ಕಲ್ಪನೆಯ ಕೂಸು. ವಿದೇಶದಲ್ಲೂ ಬಣ್ಣದ ವೇಷದ ಘನಸ್ತಿಕೆಯನ್ನು ಪ್ರದರ್ಶಿಸಿದ ವೇಷಧಾರಿ ಮಾತ್ರವಲ್ಲದೇ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅನೇಕ ಕಮ್ಮಟಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು.

ಸದಾಶಿವ ಶೆಟ್ಟಿಗಾರ್ ಅವರಿಗೆ ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಸದಾಶಿವ ಶೆಟ್ಟಿಗಾ‌ರ್ ಅವರನ್ನು ಸನ್ಮಾನಿಸಿದೆ.

Related Articles

Back to top button