ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಯೂಟ್ಯೂಬ್ ನೋಡಿ ಆಪರೇಷನ್! ಪ್ರಾಣಬಿಟ್ಟ ಮಹಿಳೆ
Views: 121
ಕನ್ನಡ ಕರಾವಳಿ ಸುದ್ದಿ: ಯೂಟ್ಯೂಬ್ ವೀಡಿಯೋ ನೋಡಿ ಶಸ್ತ್ರ ಚಿಕಿತ್ಸೆ ನಡೆಸಿದ ನಕಲಿ ವೈದ್ಯನ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ (ಡಿ.6) ನಡೆದಿದೆ. ಮುನಿಶಾರ(25) ಮೃತಪಟ್ಟ ಮಹಿಳೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುನಿಶಾರ, ಜ್ಞಾನಪ್ರಕಾಶ್ ಮಿಶ್ರಾ(48) ನಡೆಸುತ್ತಿದ್ದ ಕ್ಲಿನಿಕ್ಕೆ ಭೇಟಿ ನೀಡಿದಾಗ, ಪಿತ್ತ ಕೋಶದಲ್ಲಿ ಕಲ್ಲುಗಳು ಹೆಚ್ಚಿವೆ, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯ ಎಂದು ಆತ ವೈದ್ಯನಂತೆ ಹೇಳಿದ್ದಾನೆ ಎಂದು ಕುಟುಂಬದವರು ದೂರು ನೀಡಿದ್ದಾರೆ.
ಮಿಶ್ರಾ ಮೊದಲು ಇನ್ನೊಬ್ಬ ವೈದ್ಯರು ಶಸ್ತ್ರಚಿಕಿತ್ಸೆಗೆ ಬರುತ್ತಾರೆ ಎಂದು ಹೇಳಿದ್ದರೂ, ಕೊನೆಗೆ ಯಾರೂ ಬರಲಿಲ್ಲ. ಬಳಿಕ ನಾನು ಯೂಟ್ಯೂಬ್ ನೋಡಿದರೆ ಸಾಕು, ವಿಧಾನ ಗೊತ್ತಿದೆ ಎಂದು ಹೇಳಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾನೆ ಎಂದು ಮುನಿಶಾರ ಪತಿ ತೇಜ್ ಬಹದ್ದೂರು ರಾವತ್ ಅರೋಪಿಸಿದ್ದಾರೆ.
ಪ್ರಕ್ರಿಯೆ ತಪ್ಪಾಗಿದ್ದರಿಂದ ಮರುದಿನ ಮುನಿಶಾರ ಸ್ಥಿತಿ ಗಂಭೀರಗೊಂಡಿದ್ದು, ಪತಿ ಕ್ಲಿನಿಕ್ ಬರುವಷ್ಟರಲ್ಲಿ ಮಹಿಳೆ ಪ್ರಾಣ ಬಿಟ್ಟಿದ್ದರು. ಘಟನೆಯ ಬಳಿಕ ವೈದ್ಯಕೀಯ ತಂಡ ನಡೆಸಿದ ಪರಿಶೀಲನೆಯಲ್ಲಿ ಅವನ ಕ್ಲಿನಿಕ್ ಕೂಡ ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸಿರಲಿಲ್ಲ ಎಂದು ಬಾರಾಬಂಕಿ ಎಸ್ಪಿ ಅರ್ಪಿತ್ ವಿಜಯವರ್ಗೀಯ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ ಸಹಾಯ ಮಾಡಿದ ಆರೋಪಿಯ ಸೋದರಳಿಯನೂ ಪರಾರಿಯಾಗಿದ್ದು, ಇಬ್ಬರನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ. ಘಟನೆ ತಿಳಿದ ಗ್ರಾಮಸ್ಥರು ಹಾಗೂ ಮೃತರ ಬಂಧುಗಳು ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿದರು. ನಂತರ ಹಿರಿಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಕೋಥಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






