ರಾಜಕೀಯ

ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್

Views: 269

ಕನ್ನಡ ಕರಾವಳಿ ಸುದ್ದಿ:  ರಾಜ್ಯದಲ್ಲಿ ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಅನಿಶ್ಚಿತತೆಗೆ ಕೊನೆಗೂ ತೆರೆಬೀಳುವ ಲಕ್ಷಣಗಳು ಗೋಚರಿಸುತ್ತಿವೆ.

ಮುಂದಿನ 6 ರಿಂದ 7 ತಿಂಗಳೊಳಗೆ ಈ ಮಹತ್ವದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದ ಮೀಸಲಾತಿ ಪ್ರಕ್ರಿಯೆಯು ಇದೀಗ ಅಂತಿಮ ಹಂತದಲ್ಲಿದೆ. ಹಿಂದುಳಿದ ವರ್ಗಗಳಿಗೆ (ಒಬಿಸಿ) 50% ಮೀಸಲಾತಿಯನ್ನು ನಿಗದಿಪಡಿಸುವಾಗ ನಿಖರವಾದ ಮಾನದಂಡಗಳನ್ನು ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.

ಸರ್ಕಾರದ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (SC/ST) ಜನಸಂಖ್ಯೆಯ ನಿಖರವಾದ ಮಾಹಿತಿ ಲಭ್ಯವಿದ್ದರೂ, ಇತರ ಸಮುದಾಯಗಳ ಅಂಕಿಅಂಶಗಳ ಕೊರತೆಯಿತ್ತು. ಈ ದತ್ತಾಂಶ ಸಂಗ್ರಹ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದ ತಕ್ಷಣವೇ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂದು ಸುರೇಶ್ ತಿಳಿಸಿದ್ದಾರೆ.

ಇದೇ ವೇಳೆ, ರಾಜಧಾನಿಯ ಆಡಳಿತದ ಚುಕ್ಕಾಣಿ ಹಿಡಿಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯ ಬಗ್ಗೆಯೂ ಮಹತ್ವದ ಮಾಹಿತಿ ಲಭ್ಯವಾಗಿದೆ.

ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಈ ಚುನಾವಣೆಯನ್ನು ನಡೆಸಲು ಗಂಭೀರ ಚರ್ಚೆಗಳು ನಡೆಯುತ್ತಿವೆ. ವಾರ್ಡ್‌ಗಳ ಮರುವಿಂಗಡಣೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಕಡೆಯ ಗಡುವು ನೀಡಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಮೀಸಲಾತಿ ನಿಗದಿಪಡಿಸಿ, ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಪದೇಪದೇ ಚುನಾವಣೆ ಮುಂದೂಡಿದರೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಅರಿವು ಸರ್ಕಾರಕ್ಕಿದೆ ಎಂದು ವಿವರಿಸಿದರು.

Related Articles

Back to top button