ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ

Views: 0
ಝಿಂಬಾಬ್ವೆಯ ಶ್ರೇಷ್ಠ ಕ್ರಿಕೆಟಿಗ, ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ.
49ನೇ ವಯಸ್ಸಿನ ಹೀತ್ ಸ್ಟ್ರೀಕ್ ಅವರು ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರ ಸಾವಿನ ಸುದ್ದಿಯನ್ನು ಪತ್ನಿ ನಾಡಿನ್ ಸ್ಟ್ರೀಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ನಾಡಿನ್ ಸ್ಟ್ರೀಕ್, ಸೆಪ್ಟೆಂಬರ್ 3, 2023ರ ಭಾನುವಾರ ಮುಂಜಾನೆ, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ ನಿಧನರಾದರು. ಅವರು ತಮ್ಮ ಕೊನೆಯ ದಿನಗಳನ್ನು ಕುಟುಂಬ ಹಾಗೂ ಅವರ ಹತ್ತಿರದ ಪ್ರೀತಿಪಾತ್ರರೊಂದಿಗೆ ಕಳೆಯಲು ಬಯಸಿದ್ದರು ಎಂದು ಬರೆದಿದ್ದಾರೆ.
ಕೆಲ ದಿನಗಳ ಹಿಂದೆ ಸ್ಟ್ರೀಕ್ ಅವರ ಸಾವಿನ ಬಗ್ಗೆ ಊಹಾಪೋಹ ಹರಿದಾಡಿತ್ತು. ಸ್ಟ್ರೀಕ್ ಅವರ ಮಾಜಿ ಸಹೋದ್ಯೋಗಿ ಹೆನ್ರಿ ಒಲಾಂಗಾ ಅವರು ಸ್ಟ್ರೀಕ್ ಸಾವಿನ ಬಗ್ಗೆ ಘೋಷಿಸಿದ್ದರು. ಬಳಿಕ ಸುದ್ದಿ ಸುಳ್ಳು ಎಂದು ಬಹಿರಂಗವಾಗಿತ್ತು.
ಹೀತ್ ಸ್ಟ್ರೀಕ್ 1999-2000ದ ಸಮಯದಲ್ಲಿ ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಸ್ಟ್ರೀಕ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ 100 ವಿಕೆಟ್ಗಳನ್ನು ಪಡೆದ ಮೊದಲ ಝಿಂಬಾಬ್ವೆ ಕ್ರಿಕೆಟಿಗರಾಗಿದ್ದರು. 100 ಟೆಸ್ಟ್ ವಿಕೆಟ್ಗಳು ಹಾಗೂ 1,000 ಟೆಸ್ಟ್ ರನ್ಗಳ ಸಾಧನೆ ಮಾಡಿರುವ ದೇಶದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು.






