ಗುರು ಪೂರ್ಣಿಮೆಯಂದೇ ಪ್ರಾಂಶುಪಾಲರನ್ನು ಇರಿದು ಕೊಂದ ವಿದ್ಯಾರ್ಥಿಗಳು!
ವಿದ್ಯೆ ಕಲಿಸಿದ ಗುರುವನ್ನು ದೇವರೆಂದು ಪೂಜಿಸುವ ದಿನವಾದ ಗುರು ಪೂರ್ಣಿಮೆಯಂದೇ ತಲೆಕೂದಲು ಕತ್ತರಿಸಿ ಶಾಲೆಗೆ ಬರುವಂತೆ ಸೂಚನೆ ನೀಡಿದ ಪ್ರಾಂಶುಪಾಲರನ್ನು 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಕೊಲೆ

Views: 258
ಕನ್ನಡ ಕರಾವಳಿ ಸುದ್ದಿ: ತಲೆಕೂದಲು ಕತ್ತರಿಸದೆ ಮತ್ತು ಅಶಿಸ್ತಿನಿಂದ ನಡೆದುಕೊಳ್ಳುತ್ತಿದ್ದ ಇಬ್ಬರು ಬಾಲಕರು ಶಾಲೆಯ ಪ್ರಾಂಶುಪಾಲರನ್ನು ಇರಿದು ಕೊಂದಿದ್ದಾರೆ. ಹರಿಯಾಣದ ಹಿಸಾರ್ ನ ಹಳ್ಳಿಯೊಂದರಲ್ಲಿ ಇಂದು (ಗುರುವಾರ) ಬೆಳಿಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆಯಿತು. ಮಕ್ಕಳು ಪ್ರಾಂಶುಪಾಲರನ್ನು ಕೊಂದಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಜಗ್ಬೀರ್ ಸಿಂಗ್ (50) ಕೊಲೆಯಾದ ಪ್ರಾಂಶುಪಾಲರು.
ತಲೆಕೂದಲು ಕತ್ತರಿಸಿ ಶಾಲೆಗೆ ಬಂದು ಶಿಸ್ತಿನಿಂದ ವರ್ತಿಸುವಂತೆ ಪ್ರಾಂಶುಪಾಲರು ಹೇಳಿರುವುದಕ್ಕೆ ಬಾಲಕರು ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಹಾನ್ಸಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ ಪಿ) ಅಮಿತ್ ಯಶ್ ವರ್ಧನ್ ತಿಳಿಸಿದರು.
ಕರ್ತಾರ್ ಮೆಮೋರಿಯಲ್ ಶಾಲೆಯ ಇಬ್ಬರು ಅಪ್ರಾಪ್ತ ಬಾಲಕರು ಪ್ರಾಂಶುಪಾಲರ ವಿರುದ್ಧ ಕೋಪಗೊಂಡು, ಅವರನ್ನು ಇರಿದು ಕೊಂದು ಹಾಕಿದ್ದಾರೆ. ತಲೆಕೂದಲು ಕತ್ತರಿಸಿ ಶಾಲೆಯಲ್ಲಿ ಶಿಸ್ತು ಕಾಯ್ದುಕೊಳ್ಳುವಂತೆ ಪ್ರಾಂಶುಪಾಲರು ತಿಳಿಸಿದ್ದರು ಎಂದು ಎಸ್ ಪಿ ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಕೂಡಾ ಅಪ್ರಾಪ್ತರು. ಇಲ್ಲಿಯವರೆಗೆ ನಾವು ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪ್ರಾಂಶುವಾಲರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಹಿಸಾರ್ ಗೆ ಕಳುಹಿಸಿ ಕೊಡಲಾಗಿದೆ. ಪ್ರಕರಣದ ತನಿಖೆ ಆರಂಭಿಸಲಾಗಿದೆ ಎಂದು ಎಸ್ಪಿ ಹೇಳಿದರು. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.